ಪ್ರಯಾಗ್ರಾಜ್: ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ, ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ನನ್ನು ಮಾಧ್ಯಮಗಳು ಹಾಗೂ ಪೊಲೀಸರ ಎದುರೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಉತ್ತರ ಪ್ರದೇಶದ ಪ್ರಯಗರಾಜ್ ನಗರದಲ್ಲಿ ವೈದ್ಯಕೀಯ ತಪಾಸಣೆಗಾಗಿ ಈ ಇಬ್ಬರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹತ್ಯೆ ಮಾಡಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗಲೇ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೆಲಕ್ಕೆ ಬಿದ್ದ ಅಹ್ಮದ್ ಮತ್ತು ಆತನ ಸಹೋದರನ ಮೇಲೆ ಕನಿಷ್ಠ ಇಬ್ಬರು ವ್ಯಕ್ತಿಗಳು ಹತ್ತಿರದಿಂದ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಗುಂಡಿನ ದಾಳಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸನ್ನಿ, ಲವಲೇಶ್ ಮತ್ತು ಅರುಣ್ ಎಂದು ಗುರುತಿಸಲಾಗಿದ್ದು, ದಾಳಿಕೋರರು ಮಾಧ್ಯಮದವರಂತೆ ವೇಷ ಧರಿಸಿದ್ದರು ಎನ್ನಲಾಗಿದೆ.
ಅತೀಕ್ ಅಹ್ಮದ್ ಪುತ್ರ ಅಸದ್ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಪೊಲೀಸರು ಏಪ್ರಿಲ್ 13 ರಂದು ಎನ್ಕೌಂಟ್ ಮಾಡಿದ ಬೆನ್ನಲ್ಲೇ ಈ ಗುಂಡಿನ ದಾಳಿ ನಡೆದಿದೆ. ಪುತ್ರನ ಕೊಲೆ ನಡೆದ ಎರಡೇ ದಿನಕ್ಕೆ ಹತೀಕ್ ಹತ್ಯೆ ನಡೆದಿದ್ದು, ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ
ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ 2005 ರ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್ಗೆ ಶಿಕ್ಷೆಯಾಗಿತ್ತು. ಫೆಬ್ರವರಿ 24 ರಂದು ಪ್ರಯಾಗರಾಜ್ನಲ್ಲಿ ಹ್ಯುಂಡೈ ಕ್ರೆಟಾ ಎಸ್ಯುವಿಯ ಹಿಂಬದಿ ಸೀಟಿನಿಂದ ಹೊರಗಿಳಿಯುತ್ತಿದ್ದಾಗ ಉಮೇಶ್ ಪಾಲ್ನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಶೂಟೌಟ್ನಲ್ಲಿ ಕೊಲ್ಲಲ್ಪಟ್ಟಿದ್ದರು.
ಉಮೇಶ್ ಪಾಲ್ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ದೋಷಿ ಎಂದು ಪ್ರಯಾಗರಾಜ್ ನ್ಯಾಯಾಲಯ ತೀರ್ಪು ನೀಡಿತ್ತು. ಅತೀಕ್ ಅಹ್ಮದ್, ಖಾನ್ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರಿಗೆ ಪ್ರಯಾಗ್ರಾಜ್ನಲ್ಲಿರುವ ಎಂಪಿ/ಎಂಎಲ್ಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಲೆ ಮತ್ತು ಅಪಹರಣ ಸೇರಿದಂತೆ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಮಾಜಿ ಸಂಸದ ಮತ್ತು ಶಾಸಕ ಅತೀಕ್ ಅಹ್ಮದ್ ಎದುರಿಸುತ್ತಿದ್ದರು.