ಕಳಸ: ಮೊನ್ನೆ ನಡೆದ ದ್ವಿತೀಯ ಪಿಯುಸಿ ಪರಿಕ್ಷೇಯ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡ ಕಾರಣಕ್ಕೆ ಜಾಂಬಳೆಯ ಇಬ್ಬರು ವಿದ್ಯಾರ್ಥಿನಿಯರು ವಿಷ ಸೇವಿಸಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು ಮತ್ತೊಬ್ಬಳ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.
ಕಳಸ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್. ಕೆ.ಮೇಗಲ್ ಗ್ರಾಮದ ಚಂದ್ರರಾಜಯ್ಯ ಅವರ ಪುತ್ರಿ ಸ್ಪರ್ಶ ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು. ಇದೇ ಕಾರಣಕ್ಕೆ ತೀವ್ರ ಮನನೊಂದಿದ್ದಳು. ಎ.21ರ ಮಧ್ಯಾಹ್ನ ಆಕೆ ವಿಷ ಸೇವಿಸಿದ್ದಾಗಿ ತಂದೆಗೆ ತಿಳಿಸಿದ್ದಳು. ತೀವ್ರ ಅಸ್ವಸ್ಥಳಾಗಿದ್ದ ಸ್ಪರ್ಶಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದ ಕಾರಣಕ್ಕೆ ಆಕೆಯನ್ನು ಮನೆಗೆ ವಾಪಸ್ ಕರೆತರಲಾಗಿತ್ತು. ಬುಧವಾರ ಬೆಳಗ್ಗೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಮತ್ತೊಂದು ಘಟನೆಯಲ್ಲಿ ಜಾಂಬಳೆಯ ಸವಿತಾ ಎಂಬ ಕೂಲಿ ಕೆಲಸದ ಮಹಿಳೆಯ ಪುತ್ರಿ ದಿಕ್ಷಿತಾ(18) ಎಂಬ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.
ಕಳಸ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಕ್ಷಿತಾ 2 ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು. ಬುಧವಾರ ಬೆಳಗ್ಗೆ ಮೃತಪಟ್ಟ ಸ್ಪರ್ಶ ಇವಳ ಗೆಳತಿ ಆಗಿದ್ದಳು. ಆಕೆಯ ಸಾವಿನ ಸುದ್ದಿ ತಿಳಿದ ನಂತರ ದಿಕ್ಷಿತಾ ವಿಷ ಸೇವಿಸಿದ್ದು ಕಳಸದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯಿಂದ ವರದಿಯಾಗಿದೆ.