ಮನೆಗೆ ಪಾನಮತ್ತನಾಗಿ ಬಂದಿದ್ದ ತಂದೆ ಮಗನಿಗೆ ಮತ್ತು ತಾಯಿಗೆ ಹೊಡೆಯಲು ಬಂದಾಗ ತಂದೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋದ ಹನ್ನೆರಡು ವರ್ಷದ ಬಾಲಕ ಬೀದಿನಾಯಿಗಳ ದಾಳಿಗೆ ಮೃತಪಟ್ಟ ಘಟನೆ ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬುಧವಾರ ಮುಂಜಾನೆ ನಿರ್ಜನ ಪ್ರದೇಶದಲ್ಲಿ ಬಾಲಕನ ದೇಹ ಗಂಭೀರ ಗಾಯಗಳೊಂದಿಗೆ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಮೃತ ಬಾಲಕನನ್ನು ಹಳೆ ಪೊಲೀಸ್ ಲೈನ್ ಕಾಲೋನಿಯಲ್ಲಿ ಕುಟುಂಬದ ಜತೆ ವಾಸವಿದ್ದ ಪ್ರಿನ್ಸ್ ಎಂದು ಗುರುತಿಸಲಾಗಿದೆ.
ಬಾಲಕನ ತಂದೆ ಓಂಕಾರ್ ಎಂಬಾತ, ಮಂಗಳವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದು ಪತ್ನಿ ಹಾಗೂ ಮಕ್ಕಳನ್ನು ಹೊಡೆಯಲು ಆರಂಭಿಸಿದ. ಇದಾದ ತಕ್ಷಣ ಪ್ರಿನ್ಸ್ ಭಯದಿಂದ ಮನೆಯಿಂದ ಓಡಿಹೋದ ಎಂದು ಮೂಲಗಳನ್ನು ಉಲ್ಲೇಖಿಸಿ timesofindia ವರದಿ ಮಾಡಿದೆ.
ಬಾಲಕ ಮನೆಗೆ ಮರಳದೇ ಇದ್ದಾಗ ತಾಯಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಬುಧವಾರ ಬೆಳಿಗ್ಗೆ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬಾಲಕನ ಮೃತದೇಹ ಗಂಭೀರ ಗಾಯಗಳಾಗಿದ್ದು ಬೀದಿ ನಾಯಿಗಳ ದಾಳಿಗೆ ತುತ್ತಾದ ರೀತಿಯಲ್ಲಿ ಪತ್ತೆಯಾಗಿದ್ದು ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.