ಉಳ್ಳಾಲ: ಸ್ವಂತ ಮಗಳ ಮದುವೆಯ ದಿನದಂದೇ ವಿಧಿಯಾಟಕ್ಕೆ ಬಲಿಯಾದ ತಂದೆ ಹೃದಯಘಾತಗೊಂಡು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಬೋಳಿಯಾರ್ನ ಕುಚುಗುಡ್ಡೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯನ್ನು ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ (60) ಎಂದು ತಿಳಿದು ಬಂದಿದೆ.
ಹಸನಬ್ಬ ಅವರ ಮಗಳಿಗೆ ಕೇರಳ ರಾಜ್ಯದ ಕಾಸರಗೋಡುವಿನ ಯುವಕನೊಂದಿಗೆ ಸೋಮವಾರದಂದು ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಗದಿಪಡಿಸಿದ್ದರು.
ದುರದೃಷ್ಟವಶಾತ್ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಕುಕ್ಕೋಟ್ಟು ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಎರಡು ಗಂಡು ಹಾಗೂ ನಾಲ್ಕು ಪುತ್ರಿಯರಿದ್ದಾರೆ. ಈ ಕಾರಣದಿಂದ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು.
ಹಾಗೂ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ಸರಳವಾಗಿ ನಿಖಾ ನೆರವೇರಿದೆ ಎಂದು ತಿಳಿದು ಬಂದಿದೆ.ಸಂತಸ ತುಂಬಿರಬೇಕಾದ ಮನೆಯಲ್ಲಿ ಮೌನ ಆವರಿಸಿ ದುಃಖದ ಕಡಲಲ್ಲಿ ಮುಳುಗುವಂತಾಗಿದೆ.