ದೇಶದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಒಡಿಶಾದ ಬಾಲಸೋರ್ನಲ್ಲಿ ನೆನ್ನೆ (ಜೂ.2) ನಡೆದ ರೈಲು ಅಪಘಾತವು ಒಂದು. ಈ ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ರಕ್ತದ ಅಗತ್ಯವಿದ್ದು, ಒಡಿಶಾ ಆಸ್ಪತ್ರೆಗಳಲ್ಲಿ ರಕ್ತ ನೀಡಲು ಜನ ಸಾಲು ಸಾಲು ನಿಂತಿದ್ದಾರೆ.
ಶ್ರೇಷ್ಠ ದಾನಗಳಲ್ಲಿ ರಕ್ತದಾನವು ಒಂದು ಎಂಬ ಮಾತು ಇದೆ. ಇದೀಗ ಈ ಕಾರ್ಯ ಮಾನವೀಯ ದೃಷ್ಟಿಗೆ ಸಾಕ್ಷಿಯಾಗಿದೆ, ಜಾತಿ, ಧರ್ಮದ ಭೇದವಿಲ್ಲದೆ, ಎಲ್ಲರೂ ಈ ಕಾರ್ಯದಲ್ಲಿ ತೋಡಗಿದ್ದಾರೆ. ಒಂದು ಕಡೆ ದುರಂತದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದ್ದರೆ. ಇನ್ನೊಂದು ಕಡೆ ಗಾಯಗೊಂಡ ಜನರಿಗೆ ರಕ್ತ ನೀಡಿ ಜೀವ ಉಳಿಸುವ ಕಾರ್ಯ ನಡೆಯುತ್ತಿದೆ.
ಮನುಷ್ಯ ಮನುಷ್ಯರ ನಡುವೆ ಇರುವ ಮಾನವೀಯತೆಗೆ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿ ಕಷ್ಟದಲ್ಲಿರುವಾಗ ಆತನಿಗೆ ಸಾಹಯ ಮಾಡುವುದು ಮಾನವಕುಲದ ಧರ್ಮ ಎಂದು ನಮ್ಮ ಹಿರಿಯರು ಹೇಳಿರುವ ಮಾತಿಗೆ ಇದು ಉದಾಹರಣೆಯಾಗಿದೆ.
ಅಧಿಕಾರಿಗಳ ಪ್ರಕಾರ, ಈವರೆಗೆ 233 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಶನಿವಾರ ಶೋಕಾಚರಣೆಯನ್ನು ಘೋಷಿಸಿದೆ.
ನೆನ್ನೆ (ಜೂ.3) ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕೋಲ್ಕತ್ತಾದಿಂದ ಹೆಚ್ಚಿನ ಸೇನಾ ಸಿಬ್ಬಂದಿ ಬಂದಿದೆ ಎಂದು ಭಾರತೀಯ ಸೇನೆಯ ಕರ್ನಲ್ ಎಸ್‌ಕೆ ದತ್ತಾ ತಿಳಿಸಿದ್ದಾರೆ. ನಾವು ಕಳೆದ ರಾತ್ರಿಯಿಂದ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಕೋಲ್ಕತ್ತಾದಿಂದ (ಸೇನೆಯ) ಹೆಚ್ಚಿನ ಸೇನೆಗಳು ಬರುತ್ತಿವೆ ಎಂದು ಕರ್ನಲ್ ಎಸ್‌ಕೆ ದತ್ತಾ ಎಎನ್‌ಐಗೆ ತಿಳಿಸಿದ್ದಾರೆ.
ದೇಶ-ವಿದೇಶಗಳಿಂದ ಹರಿದು ಬಂದ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಒಡಿಸ್ಸಾ ರೈಲು ದುರಂತದ ಪರಿಸ್ಥಿತಿ ಅವಲೋಕನ ನಡೆಸಲು ಸಭೆ ಕರೆದಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ತಮ್ಮ ರಾಜ್ಯದ ಗಾಯಾಳುಗಳ ಚಿಕಿತ್ಸೆಗೆ ಶ್ರಮಿಸುತ್ತಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಎನ್‌ಸಿಪಿ ಪಕ್ಷವು ದುರಂತದ ಸಂಪೂರ್ಣ ತನಿಖೆಗೆ ಒತ್ತಾಯಿಸಿದೆ.
ಓಡಿಸ್ಸಾ ರೈಲು ದುರಂತಕ್ಕೆ ದೇಶ-ವಿದೇಶದ ನಾಯಕರು ಸಂತಾಪ ಸೂಚಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡು, ತೈವಾನ್ ಪ್ರಧಾನಿ ತ್ಸೈ ಇಂಗ್-ವೆನ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವರು ರೈಲು ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.