ನಟ, ನಿರ್ದೇಶಕ, ನಿರ್ಮಾಪಕ ಕಮಾಲ್ ಆರ್.ಖಾನ್ ಅವರು ಸದಾ ಸುದ್ದಿ ಆಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮೂರು ಹೊತ್ತು ಏನಾದರೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ವಿಮರ್ಶೆ ಮಾಡುವ ಮೂಲಕ ಅವರು ಒಂದಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದುಂಟು. ನಟ-ನಟಿಯರಿಗೆ ಬಾಡಿ ಶೇಮಿಂಗ್ ಮಾಡುವುದರಿಂದಲೂ ಅವರು ಕಿರಿಕ್ ಮಾಡಿಕೊಂಡ ಉದಾಹರಣೆ ಇದೆ.
ಇದೆಲ್ಲವನ್ನೂ ಬಿಟ್ಟು ಈಗ ಕಮಾಲ್ ಆರ್. ಖಾನ್ ಅವರು ತಮ್ಮ ಆರೋಗ್ಯದ ಬಗ್ಗೆ ಈಗ ಟ್ವೀಟ್ ಮಾಡಿದ್ದಾರೆ. ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ ತಮಗೆ ಏನೆಲ್ಲ ತೊಂದರೆ ಆಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಇಂದು (ಜೂನ್ 12) ನಸುಕಿನ 3.44ಕ್ಕೆ ಎದ್ದು ಅವರು ಆತಂಕದಲ್ಲಿ ಟ್ವೀಟ್ ಮಾಡಿದ್ದಾರೆ.
‘ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಾಗಿನಿಂದ ನನಗೆ ಒಂದು ಕಿಲೋ ಮೀಟರ್ ಕೂಡ ನಡೆಯಲು ಸಾಧ್ಯವಾಗುತ್ತಿಲ್ಲ. ಎದೆಯಲ್ಲಿ ವಿಪರೀತ ನೋವು ಆಗುತ್ತಿದೆ. ಒಂದು ವೇಳೆ ನಾನು ಹೆಚ್ಚು ನಡೆಯಲು ಪ್ರಯತ್ನಿಸಿದರೆ ನನ್ನ ಸ್ನೇಹಿತ ರಾಜು ಶ್ರೀವಾಸ್ತವ ರೀತಿ ಕುಸಿದು ಬಿದ್ದು ಸಾಯುತ್ತೇನೆ ಅಂತ ವೈದ್ಯರು ನನಗೆ ಹೇಳಿದರು. ಇದು ಕೊರೊನಾ ಲಸಿಕೆಯ ದೊಡ್ಡ ಹಗರಣ’ ಎಂದು ಕಮಾಲ್ ಆರ್. ಖಾನ್ ಬರೆದುಕೊಂಡಿದ್ದಾರೆ.
ಕಮಾಲ್ ಆರ್. ಖಾನ್ ಮಾಡಿರುವ ಈ ಪೋಸ್ಟ್ ವೈರಲ್ ಆಗಿದೆ. ಅದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಆರ್ಕೆ ಮಾತಿಗೆ ಬಹುತೇಕರು ಸಹಮತ ಸೂಚಿಸಿದ್ದಾರೆ. ತಮಗೂ ಅದೇ ರೀತಿ ಅನುಭವ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಏನೂ ಆಗಲ್ಲ. ಧೈರ್ಯದಿಂದಿರಿ’ಎಂದು ಕೆಲವರು ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.