ಕೊಲಂಬಿಯಾ: ತಾಯಿ ಹಾಗೂ ತನ್ನ ನಾಲ್ವರು ಪುಟ್ಟ ಮಕ್ಕಳು ಹೊರಟಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ, ತಾಯಿ ಮೃತಪಟ್ಟು ಮಕ್ಕಳು ಪವಾಡಸದೃಶ ಪಾರಾದ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.
ಕೊಲಂಬಿಯಾ ದೇಶದ ಮಹಿಳೆಯೊಬ್ಬರು ಮೇ 01 ರಂದು ತನ್ನ ನಾಲ್ವರು ಮಕ್ಕಳೊಂದಿಗೆ ವಿಮಾನದಲ್ಲಿ ಜ್ವಾಲಿ ರೈಡ್ ಹೊರಟಿದ್ದರು. ಆದರ ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತಕ್ಕೀಡಾಗಿತ್ತು. ವಿಮಾನ ಕ್ರಾಶ್ ಆಗಿ ಅಮೆಝಾನ್ ಕಾಡಿನಲ್ಲಿ ಉದುರಿ ಬಿದ್ದಿತ್ತು.
ಕಾಣೆಯಾದ ವಿಮಾನವನ್ನು ಹುಡುಕುತ್ತಾ ಬಂದ ರಕ್ಷಣಾ ಅಧಿಕಾರಿಗಳಿಗೆ ತಾಯಿ ಮತ್ತು ಪೈಲಟ್ ಶವ ಅಮೆಝಾನ್ ಕಾಡಿನಲ್ಲಿ ದೊರೆತಿತ್ತು. ಆದರೆ ಮಕ್ಕಳ ಶವ ದೊರೆತಿರಲಿಲ್ಲ. ಮಕ್ಕಳನ್ನು ಹುಡುಕುತ್ತಿರುವ ಸಂದರ್ಭ ಅರ್ಧ ತಿಂದ ಹಣ್ಣು, ಮಗುವಿನ ಹಾಲಿನ ಬಾಟಲಿ, ಚಪ್ಪಲಿಗಳು ಸಿಕ್ಕಿದ್ದವು.
ಹಾಗಾಗಿ ಮಕ್ಕಳು ಬದುಕುಳಿದಿರಬಹುದು ಎಂಬ ನಂಬಿಕೆಯಿಂದ ಮಿಲಿಟರಿ ಪಡೆ ಶೋಧ ಕಾರ್ಯ ಮುಂದುವರೆಸಿದ್ದರು. ಪವಾಡ ಎಂಬಂತೆ 40 ದಿನಗಳ ಬಳಿಕ ನಾಲ್ವರು ಮಕ್ಕಳು ದಟ್ಟಗಾಡಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ಒಬ್ಬ ದೊಡ್ಡ ಮಗನಿಗೆ 13 ವರ್ಷ, ಎರಡನೇದಕ್ಕೆ 9 ವರ್ಷ, ಮೂರನೇ ಮಗುವಿಗೆ 4 ವರ್ಷವಾಗಿದ್ದು, ಇನ್ನೋಂದು ಒಂದು ವರ್ಷದ ಮಗು ಎಂದು ತಿಳಿದು ಬಂದಿದೆ.
ಮಕ್ಕಳು ಪತ್ತೆಯಾಗಿದ್ದು ಹೇಗೆ ?:
ಮಕ್ಕಳು ಜೀವಂತ ಇದ್ದಾರೆ ಎಂಬ ನಂಬಿಕೆಯಿಂದ ಕೊಲಂಬಿಯಾ ಮಿಲಿಟರಿ ಪಡೆ ಕಾಡಿನಲ್ಲಿ ಹುಡುಕಾಟ ನಡೆಸುತ್ತದೆ. ಕಾಡಿನ ಮೇಲೆ ಹೆಲಿಕಾಪ್ಟರ್ ಹಾರಿಸಿ ಅಲ್ಲಲ್ಲಿ ನೀರಿನ ಬಾಟಲಿ, ಸ್ನಾಕ್ಸ್ ಪೊಟ್ಟಣಗಳನ್ನು ಉದುರಿಸುತ್ತದೆ. ಮಕ್ಕಳು ಹುಟಿಟೋ ಕಮ್ಯುನಿಟಿಯವರು. ಹುಟಿಟೋ ಜನರಿಗೆ ಕಾಡೆಂದರೆ ಕ್ಯಾರೇ ಇಲ್ಲ. ಹೀಗಾಗಿ ಮಕ್ಕಳು ಕಾಡಿಗೆ,ಅದರ ಸವಾಲಿಗೆ ಜಗ್ಗುವುದಿಲ್ಲ ಎಂಬುದು ಮಿಲಿಟರಿಯ ವಿಶ್ವಾಸ.
ಮಕ್ಕಳ ಅಜ್ಜಿಯ ಧ್ವನಿ ದಾಖಲಿಸಿ, ಮಕ್ಳೇ ಎಲ್ಲೂ ಹೋಗ್ಬೇಡಿ, ಅಲ್ಲೇ ಇರಿ ಎನ್ನುವ ಕೂಗನ್ನು ದೊಡ್ಡದಾಗಿ ಕಾಡೊಳಗೆ ಹರಿಯಬಿಡುತ್ತಾರೆ. ನಲುವತ್ತು ದಿನಗಳಾದವು.
ಇಂದು ಆ ನಾಲ್ಕೂ ಮಕ್ಕಳು ಅಮೆಝಾನ್ ಎಂಬ ದಟ್ಟಡವಿಯೊಳಗೆ ಪತ್ತೆಯಾಗಿದ್ದಾರೆ.
ಮಕ್ಕಳ ಜೊತೆ ಇರುವ ಫೋಟೋಗಳನ್ನು ಮಿಲಿಟರಿ ಪ್ರಕಟಿಸಿದೆ.
ಮೂವರು ಸಹೊದರರ ಜೊತೆ 40 ದಿನ ಕಾಲ ಕಳೆದ ಒಂದು ವರ್ಷದ ಕಂದಮ್ಮ!:
ಅಚ್ಚರಿಯೆಂದರೆ ಈ ಮಕ್ಕಳು ವಿಮಾನ ಕ್ರಾಶ್ ಆಗಿಯೂ ಬದುಕಿದ್ದಾರೆ. ಅಮೆಜಾನ್ ಕಾಡೊಳಗೆ ನಲುವತ್ತು ದಿನ ಕಳೆದು ಬದುಕಿದ್ದಾರೆ. ಮಕ್ಕಳು ಏನು ತಿಂದಿದ್ದಾರೆ, ಏನು ಕುಡಿದಿದ್ದಾರೆ ಅನ್ನೋದೆ ಅಚ್ಚರಿ.
ಆ ಅಡವಿಯ ಮೃಗಗಳೂ ಮಕ್ಕಳತ್ತ ಸುಳಿದಾಡಲಿಲ್ಲ. ಆ ಮೂವರು ಮಕ್ಕಳು ತನ್ನ ಪುಟಾಣಿ ಸಹೋದರನನ್ನು ಕ್ಷೇಮವಾಗಿ ನೋಡಿಕೊಂಡಿದ್ದಾರೆ.
ಬೀಜಗಳು, ಹಣ್ಣುಗಳು, ಬೇರುಗಳು ಮತ್ತು ಸಸ್ಯಗಳನ್ನು ಸಹ ಸೇವಿಸಿದ್ದು, ಬಳಲಿಕೆ, ದೈಹಿಕ ನೋವು, ಕೀಟಗಳಿಂದ ಕಚ್ಚಿಸಿಕೊಂಡಿದ್ದರು, ಇದೆಲ್ಲಕ್ಕೂ ಚಿಕಿತ್ಸೆ ನೀಡಲಾಗಿದೆ. ಮಕ್ಕಳು ಕ್ಷೇಮವಾಗಿ ಸಿಕ್ಕ ವಿಷಯ ತಿಳಿದು ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಕುಣಿದು ಸಂಭ್ರಮಿಸಿದ್ದಾರೆ.