ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಆಗಮನವಾಗಿದ್ದು, ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.
ಮುಂದಿನ ಎರಡರಿಂದ ಮೂರು ದಿನಗಳ ಕಾಲ ಇದೇ ರೀತಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 13 ರ ಇಂದು ಮತ್ತು ನಾಳೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಅಂದರೆ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
ಕರಾವಳಿ ಭಾಗದಲ್ಲಿ ಇಂದು ಬಿರುಗಾಳಿ ಗಂಟೆಗೆ 40-45 ಕಿಲೋ ಮೀಟರ್ ನಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ವಾತಾವರಣ ಇದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲೂ ಅಬ್ಬರಿಸಿದ ವರುಣ :
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದು ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್ ಗಳಲ್ಲೂ ವ್ಯಾಪಕ ಮಳೆ ಸುರಿದಿದ್ದು ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲಬುರಗಿಯಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬ ಬಲಿಯಾದರೆ, ಇನ್ನೊಂದೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ.
ಹಲವಾರು ರಸ್ತೆಗಳು ಜಲಾವೃತಗೊಂಡಿವೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಭಾರಿ ಮಳೆಗೆ ಜನರು ಪರದಾಟ ನಡೆಸುವಂತಾಗಿದೆ. ಶಹಾಪುರದ ಬಸವೇಶ್ವರ ವೃತ್ತ, ತರಕಾರಿ ಮಾರ್ಕೆಟ್ ರಸ್ತೆ ಜಲಾವೃತಗೊಂಡು ರಸ್ತೆ ಬದಿ ವ್ಯಾಪಾರಿಗಳು, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು.
ಅಷ್ಟೇ ಅಲ್ಲದೆ, ಶಹಾಪುರ ಪೊಲೀಸ್ ಠಾಣೆಯ ಆವರಣಕ್ಕೂ ಮಳೆ ನೀರು ನುಗ್ಗಿದೆ.