ಕೊಡಗು: ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಎಫ್ಎಂಸಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.
ಕುಶಾಲನಗರದ ಇಂದಿರಾ ಬಡಾವಣೆಯ ನಿವಾಸಿ ಪೂಣಚ್ಚ ಎಂಬುವರ ಪುತ್ರಿ ಭಾವನಾ(21) ಮೃತ ವಿದ್ಯಾರ್ಥಿನಿ. ಭಾವನಾ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬುಲೆಟ್ ಬೈಕ್ ಸ್ಕೂಟಿಗೆ ಅಪ್ಪಳಿಸಿದೆ. ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಯುವತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ: ಬೈಕ್ ಮತ್ತು ಸ್ಕೂಟಿ ಅಪಘಾತದಲ್ಲಿ ರಸ್ತೆಗೆ ಬಿದ್ದ ಯುವತಿಯ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಇನ್ನು ಯುವತಿಯನ್ನು ಸ್ಥಳೀಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗುತ್ತಿತ್ತು. ಆದರೆ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿ ದಾರಿ ಮಧ್ಯದಲ್ಲಿಯೇ ತಂದೆ- ತಾಯಿ ಮಡಿಲಲ್ಲಿ ಪ್ರಾಣವನ್ನು ಬಿಟ್ಟಿದ್ದಾಳೆ. ಮಗಳ ಸಾವನ್ನು ನೋಡಿದ ಪೋಷಕರು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.