ಸವಣೂರು: ಇಲ್ಲಿನ ಪ್ರತಿಷ್ಠಿತ ಬದ್ರಿಯಾ ಜುಮ್ಮಾ ಮಸ್ಜಿದ್ ಚಾಪಲ್ಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ರಿ. ಇದರ ಬೆಳ್ಳಿಹಬ್ಬ ವರ್ಷಾಚರಣೆಯ ಅಂಗವಾಗಿ ‘ಸರಕಾರಿ ಸವಲತ್ತುಗಳ ಮಾಹಿತಿ ಹಾಗೂ ನೋಂದಾವಣೆ ಕಾರ್ಯಾಗಾರ’ ಜುಲೈ 23ನೇ ಆದಿತ್ಯವಾರದಂದು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.



ಕಾರ್ಯಾಗಾರಕ್ಕೆ ಚಾಲನೆ ನೀಡಿದ ಸವಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಅವರು ಮಾತನಾಡಿ ” ಸರಕಾರಿ ಸವಲತ್ತುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಈ ಕಾರ್ಯಾಗಾರ ಶ್ಲಾಘನೀಯವಾಗಿದ್ದು, ಈ ಮೂಲಕ ಪ್ರತಿಯೊಬ್ಬ ನಾಗರಿಕನೂ ಸರಕಾರ ಜಾರಿಗೆ ತಂದ ಯೋಜನೆಗಳ ಪ್ರಯೋಜನ ಪಡೆಯುವಂತಾಗಲಿ” ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಝಕರಿಯಾ ಮಾಂತೂರು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕೆನರಾ, ಅಲ್ ನೂರ್ ಸ್ಥಾಪಕಾಧ್ಯಕ್ಷ ಪುತ್ತುಬಾವ ಹಾಜಿ, ಅನಿವಾಸಿ ಉದ್ಯಮಿ ಅಶ್ರಫ್ ಆರಿಗಮಜಲು ಉಪಸ್ಥಿತರಿದ್ದರು. ಜಮಾಅತಿನ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಲ್ ನೂರ್ ಸದಸ್ಯರು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ನೂರಾರು ಮಂದಿ ಭಾಗವಹಿಸಿ, ವಿವಿಧ ಸವಲತ್ತುಗಳ ಮಾಹಿತಿ ಹಾಗೂ ನೋಂದಾವಣೆ ಮಾಡಿಸಿಕೊಂಡರು.