ಮಂಗಳೂರು, ໖.14: ಲೋಕಸಭಾ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಚುನಾವಣೆಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ನಗರದಲ್ಲಿ ರವಿವಾರ ಜನಸಾಗರದ ನಡುವೆ ರಾತ್ರಿ ಹೊತ್ತು ರೋಡ್ ಶೋ ನಡೆಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ರೋಡ್ ಶೋ ಮೂಲಕ ಮತ ಬೇಟೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಬಿಜೆಪಿಯ ನಾಯಕರು, ಕಾರ್ಯಕರ್ತರು, ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು.




ಮೈಸೂರಿನಿಂದ ನೇರವಾಗಿ ಮಂಗಳೂರು ವಿಮಾನದ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕೊನೆಗೆ ನಿರ್ಧಾರವಾಗಿದ್ದ ನಿಗದಿತ ಅವಧಿಗೆ 9 ನಿಮಿಷ ಮುಂಚಿತವಾಗಿ ನಗರದ ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ವಿಶೇಷ ವಾಹನದಲ್ಲಿ ಆಗಮಿಸಿದ್ದರು. ಸರಿಯಾಗಿ 7.36ಕ್ಕೆ ನಾರಾಯಣ ಗುರು ವೃತ್ತದ ಬಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 7.39ಕ್ಕೆ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ರೋಡ್ ಶೋಗಾಗಿ ಸಿದ್ಧಪಡಿಸಲಾಗಿದ್ದ ವಾಹನ ಏರಿದರು.
ಬಿಳಿ ಬಣ್ಣದ ಕುರ್ತಾದ ಮೇಲೆ ನೀಲಿ ಬಣ್ಣದ ಓವರ್‌ಕೋಟ್ ತಲೆಯಲ್ಲಿ ಕೇಸರಿ ಟೋಪಿ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೈಯ್ಯಲ್ಲಿ ಕಮಲದ ಚಿಹ್ನೆಯನ್ನು ಹಿಡಿದು ರಸ್ತೆಯುದ್ದಕ್ಕೂ ಸೇರಿದ್ದ ಜನರತ್ತ ಕೈಬೀಸುತ್ತಾ ಸಾಗಿದರು. ಅವರ ಜತೆ ದ.ಕ. ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.