ತುಮಕೂರು: ಬಾಳೆಗೊನೆ ಕದ್ದ ಎಂಬ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೆಂಕಟೇಶ್ ಎನ್ನುವವರ ತೋಟದ ಗುಡಿಸಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ವೆಂಕಟೇಶ್ ತೋಟದ ಮನೆಯಲ್ಲಿ ವಾಸವಿದ್ದ ಕುಟುಂಬ. ಅಡಿಕೆ, ತೆಂಗು, ರಾಗಿ ನೋಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಆ ಗುಡಿಸಲಿಗೆ ಬೆಂಕಿ ಇಟ್ಟು ಕೆಲ ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದಾರೆ.
ಗ್ರಾಮದ ರಾಜ್ ಕುಮಾರ್ ಹಾಗೂ ಲಿಂಗಮೂರ್ತಿ ಎನ್ನುವವರು ಗುಡಿಸಲಿಗೆ ಬೆಂಕಿ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಕಾರಣ ವೆಂಕಟೇಶ್ ಅವರ ತೋಟದಲ್ಲಿ ಬಾಳೆಗೋನೆ ಕದ್ದ ಅಂತಾ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೂಡ ವೆಂಕಟೇಶ್ ನನ್ನ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಆದರೆ ಅನಾರೋಗ್ಯದ ಕಾರಣ ವೆಂಕಟೇಶ್ ಠಾಣೆ ಹಾಜರಾಗಿರಲಿಲ್ಲ. ಹೀಗಾಗಿ ಠಾಣೆಗೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಇಬ್ಬರು ಏಕಾಏಕಿ ಹೋಗಿ ವೆಂಕಟೇಶ್ ಗುಡಿಸಲಿಗೆ ಬೆಂಕಿ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಬೆಂಕಿಯ ಕೆನ್ನಾಲಿಗೆಗೆ ಗುಡಿಸಲಿನ ಅಕ್ಕ ಪಕ್ಕ ಇದ್ದ ಅಡಿಕೆ, ತೆಂಗು, ರಾಗಿ ಸ್ವಲ್ಪ ಮಟ್ಟಿಗೆ ಆಹುತಿಯಾಗಿದೆ. ಸದ್ಯ ಆರೋಪಗಳಿಗೆ ಪೂರಕವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಂಶ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.