ಮಂಗಳೂರು: ತನ್ನ ಕಛೇರಿಗೆ ಬರುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಪ್ರಮುಖ ಆರೋಪಿ ಹಿರಿಯ ವಕೀಲ ರಾಜೇಶ್ ಭಟ್ ಎಂಬಾತನಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಒಬ್ಬರನ್ನು ಮಂಗಳೂರು ಮಹಿಳಾ ಠಾಣೆಯ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ನಗರದ ಬೋಂದೆಲ್ ನಿವಾಸಿ ಕೆ. ಅನಂತ ಭಟ್ ಎಂಬಾತ ಬಂಧಿತ ಆರೋಪಿ.ಪ್ರಮುಖ ಆರೋಪಿ ರಾಜೇಶ್ ಭಟ್ನೊಂದಿಗೆ ಈತ ನಿರಂತರವಾಗಿ ಸಂಪರ್ಕದಲ್ಲಿದ್ದು, ಪೊಲೀಸರ ಕೈಗೆಸಿಗದಂತೆ ತಲೆಮರೆಸಿ ಕೊಳ್ಳಲು ಸಹಕರಿಸಿದ್ದ.ಅಲ್ಲದೆ ಪ್ರಕರಣ ನಡೆದ ಕೂಡಲೇ ಈತ ಆರೋಪಿ ರಾಜೇಶ್ ಭಟ್ನನ್ನು ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ತಲೆಮರೆಸಿಕೊಳ್ಳಲು ಸಹಕರಿಸಿದ್ದ.ಆರೋಪಿ ರಾಜೇಶ್ ಭಟ್ನ ಕಾರು ಮತ್ತು ಆತ ಬಳಸುತ್ತಿದ್ದ ಮೊಬೈಲ್ ಫೋನನ್ನು ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರಿಗೆ ಸಿಗದಂತೆ ಸಹಕರಿಸಿದ್ದ. ಆದರಂತೆ ಅನಂತ್ ಭಟ್ನನ್ನು ಬಂಧಿಸಲಾಗಿದೆ.ಅಲ್ಲದೆ ಪ್ರಮುಖ ಆರೋಪಿ ರಾಜೇಶ್ ಭಟ್ ಬಳಸುತ್ತಿದ್ದ ಕಾರು ಮತ್ತು ಮೊಬೈಲ್ ಫೋನ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.