ಉಳ್ಳಾಲ: ತಲಪಾಡಿ ಪರಿಸರದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಬಂಧಿತ ಆರೋಪಿ ಮುಸ್ತಫ(18) ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಎನ್ನಲಾಗಿದೆ.
ಆರೋಪಿಯು ಇಲ್ಲಿನ ಒಳ ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದು. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಸ್ಥಳೀಯರು ಆರೋಪಿಯ ಚಹರೆಯನ್ನು ಪತ್ತೆ ಹಚ್ಚಿದ್ದರು. ಇಂದು ಬಂಧಿತ ಆರೋಪಿ ಮುಸ್ತಫ ಕೂಡಾ ಸ್ಕೂಟರಿನಲ್ಲಿ ಬಂದಿದ್ದು ತಲಪಾಡಿ ಶ್ರೀರಾಮ ಭಜನಾ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಬಗ್ಗೆ ಸಂತ್ರಸ್ತೆ ಯುವತಿಯರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪೊಕ್ಸೋ ಸಹಿತ ಎರಡು ಪ್ರಕರಣಗಳು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.