ಉಡುಪಿ: ಜಿಲ್ಲೆಯ ಕೋಟ ಗ್ರಾಮದಲ್ಲಿ ಕೊರಗ ಜನಾಂಗದ ಮೇಲೆ ಪೊಲೀಸರಿಂದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಕ್ಕೆ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಇಂದು (ಜನವರಿ 1) ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮದಲ್ಲಿ ದೌರ್ಜನ್ಯಕ್ಕೊಳಗಾದ ಕುಟುಂಬಸ್ಥರನ್ನು ಸಚಿವರು ಭೇಟಿಯಾಗಿದ್ದಾರೆ. ಕೊರಗ ಸಮುದಾಯದ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಪೊಲೀಸರು ಮನುಷ್ಯತ್ವ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ. ರೌಡಿಗಳನ್ನು ನಿಯಂತ್ರಿಸಲು ಪೊಲೀಸರನ್ನ ನೇಮಕ ಮಾಡ್ತೇವೆ. ಪೊಲೀಸರೇ ರೌಡಿ ಕೆಲಸ ಮಾಡಿದರೆ ತಡೆಯೋರು ಯಾರು? ಎಸ್ಐ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾನೆ. ತಪ್ಪು ಮಾಡಿದವರಿಗೆ ಏನು ಶಿಕ್ಷೆ ಕೊಡಬೇಕು ಕೊಡುತ್ತೇವೆ. ಆತ ಇಲಾಖೆಗೆ ಸಮರ್ಥನೋ ಅಸಮರ್ಥನೋ ನಿರ್ಧರಿಸ್ತೇವೆ ಎಂದು ಕೋಟ ಗ್ರಾಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಎರಡು ದಿನ ಸುಮ್ಮನಿದ್ದ ಪೊಲೀಸ್ ಕಾನ್ಸ್ಟೇಬಲ್ ಮೂರನೇ ದಿನ ಕೇಸು ಮಾಡಿದ್ದಾನೆ. ಸರ್ಕಾರಿ ನೌಕರಿಗೆ ಅಡ್ಡಿ ಎಂದು ಪ್ರತಿ ದೂರು ನೀಡಿದ್ದಾನೆ. ಎಲ್ಲರಿಗೂ ಗೊತ್ತಾಗುತ್ತೆ ಇದೊಂದು ಸುಳ್ಳು ಕೇಸ್. ಈ ರೀತಿ ಒಬ್ಬ ಪೋಲೀಸ್ ಸುಳ್ಳು ಕೇಸು ಕೊಡಬಾರದು. ಇದು ಬಹಳ ದೊಡ್ಡ ಅಪರಾಧ. ಸಾಮಾನ್ಯ ಜನ ಇದನ್ನೆಲ್ಲ ಮಾಡ್ತಾರೆ ನಿಜ. ಆದರೆ ನಮ್ಮ ಒಬ್ಬ ಪೊಲೀಸ್ ಈ ಕೆಲಸ ಮಾಡಬಾರದಿತ್ತು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದೇ ವೇಳೆ ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಹಾಗು ಸಂತ್ರಸ್ತ 6 ಕುಟುಂಬಕ್ಕೆ 50 ಸಾವಿರ ಚೆಕ್ ನ್ನು ಸಚಿವರು ಹಸ್ತಾಂತರಿಸಿದರು.
ಗೃಹ ಸಚಿವರ ಜೊತೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ,ಎಸ್ಪಿ ಮತ್ತು ಸ್ಥಳೀಯ ಮುಖಂಡರಿದ್ದರು.