ಬೆಂಗಳೂರು: ಸಾರ್ಜನಿಕರ,ವರ್ತಕರ ಮತ್ತು ಸಚಿವ ಶಾಸಕರುಗಳ ತೀವ್ರ ವಿರೋಧದ ಬಳಿಕ ರಾಜ್ಯ ಸರ್ಕಾರ ಕೊನೆಗೂ ವಾರಾಂತ್ಯ ಕರ್ಫ್ಯೂವನ್ನು ರದ್ದುಪಡಿಸಿದೆ.

ಕಳೆದ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಕೋವಿಡ್-19 ಮೂರನೇ ಅಲೆಯನ್ನು ತಡೆಯಲು ವೀಕೆಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿ ಮಾಡಿತ್ತು.
ಇಂದು ಶುಕ್ರವಾರ ಮಧ್ಯಾಹ್ನ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬದಲಾಗಿದ್ದು, ಇನ್ನು ಮುಂದೆ ವೀಕೆಂಡ್ ಕರ್ಫ್ಯೂ ಹಾಗೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಸರಕಾರವು ಸ್ಪಷ್ಪಪಡಿಸಿದೆ.
ವರ್ತಕರು,ಹೋಟೆಲ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಸೇರಿದಂತೆ ಹಲವು ಉದ್ಯಮಿಗಳಿಗೆ ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಯಿಂದಾಗಿ ಆರ್ಥಿಕ ಹೊಡೆತ ಉಂಟಾಗಿದೆ. ಸರ್ಕಾರ ಇವೆರಡು ನಿರ್ಬಂಧನೆಗಳನ್ನ ಕೂಡಲೇ ತೆಗೆಯಬೇಕು ಎಂದು ಒತ್ತಾಯಿಸಿದ್ದರು.
ಸಭೆಯಲ್ಲಿ ತಜ್ಞರು, ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದರು. ಸಭೆಯಲ್ಲಿ ವಾರಾಂತ್ಯ ಕರ್ಫ್ಯೂ ನಿರ್ಧಾರವನ್ನು ಹಿಂಪಡೆಯಲಾಗಿದ್ದು, ಸಭೆ- ಸಮಾರಂಭಗಳಿಗೆ ಇರುವ ನಿಯಮ ಹಳೆಯ ನಿಯಮವೇ ಮುಂದುವರಿಕೆಯಾಗಲಿದೆ. ಈ ಕುರಿತು ಅಧಿಕೃತ ಘೋಷಣೆ ಬಾಕಿ ಇದೆ.
ಸಭೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಆರಗ ಜ್ಞಾನೇಂದ್ರ, ಆರ್. ಅಶೋಕ್, ಗೋವಿಂದ್ ಕಾರಜೋಳ, ಬಿಸಿ ನಾಗೇಶ್ ಭಾಗಿಯಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಪ್ರತಿನಿಧಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.