ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಬಿಳಿಕೆರೆ ಸಮೀಪದ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗರ್ಭಿಣಿ ಶವ ಪತ್ತೆಯಾಗಿದ್ದು ಗಂಡನೇ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಮೃತಪಟ್ಟ ಮಹಿಳೆಯು ವಿಜಯನಗರದ ನಿವಾಸಿ ಅಶ್ವಿನಿ(೨೩) ಎಂದು ಗುರುತಿಸಲಾಗಿದೆ.
ಮೈಸೂರು ತಾಲೂಕಿನ ಮೈದನಹಳ್ಳಿ ನಿವಾಸಿ ಪ್ರಮೋದ್ ಹಾಗೂ ವಿಜಯನಗರ ನಿವಾಸಿ ಅಶ್ವಿನಿ ಇಬ್ಬರು ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2021 ಜೂನ್ 13 ರಂದು ವಿವಾಹವಾಗಿದ್ದರು.
ಏಳು ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ, ಕೆಲ ದಿನಗಳ ಹಿಂದೆ ಗಂಡನ ಜೊತೆ ಮುನಿಸಿಕೊಂಡು ತವರು ಮನೆಗೆ ಬಂದಿದ್ದಳು.
ಭಾನುವಾರ ಮಧ್ಯಾಹ್ನ ವಿಜಯನಗರದಲ್ಲಿರುವ ಪತ್ನಿ ಮನೆ ಬಳಿ ಬಂದ ಪ್ರಮೋದ್, ಅಶ್ವಿನಿ ಜೊತೆ ಮಾತನಾಡಬೇಕು ಎಂದು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾನೆ.
ರಾತ್ರಿಯಾದರೂ ಮಗಳು ಬಾರದೇ ಇದ್ದಾಗ, ಮಗಳಿಗೆ ತಂದೆ ಹಲವು ಬಾರಿ ಫೋನ್ ಮಾಡಿದ್ದು, ಆದರೆ ಅಶ್ವಿನಿ ರಿಸೀವ್ ಮಾಡಿಲ್ಲ.
ನಂತರ ಪ್ರಮೋದ್ಗೂ ಕೂಡಾ ಕಾಲ್ ಮಾಡಿದಾಗಲೂ ಆತ ಕೂಡ ರಿಸೀವ್ ಮಾಡಿಲ್ಲವಂತೆ.
ಇಂದು ಬೆಳಗ್ಗೆ ಬಿಳಿಕೆರೆ ಸಮೀಪದ ಕೆರೆಯಲ್ಲಿ ಅಶ್ವಿನಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೋಷಕರು ಮಗಳ ಶವ ನೋಡಿ, ಇದನ್ನು ಆಕೆಯ ಗಂಡನೆ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಪೋಷಕರು ಪ್ರಕರಣ ದಾಖಲಿಸಿದ್ದು,ಆರೋಪಿ ಗಂಡನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ.