ಮಂಗಳೂರು: ನಗರದ ಹೊರವಲಯದ ಗುರುಪುರ ವಾಮಂಜೂರಿನ ಸೈಂಟ್ ರೆಮಾಂಡ್ಸ್ ಪಿಯು ಕಾಲೇಜಿನಲ್ಲಿ ಮಾರ್ಚ್ 21ರ ಸೋಮವಾರ ನಡೆದಿದ್ದ ಹಿಜಾಬ್ ವಿವಾದ ನಿನ್ನೆಯೂ ಮುಂದುವರಿದಿದ್ದು, 32 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಾಸ್ಸು ಹೋಗಿದ್ದಾರೆ.
ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು, ಹಿಜಾಬ್ ಧರಿಸಿಕೊಂಡು ಬಂದರು ಎನ್ನುವ ಕಾರಣಕ್ಕೆ ಪ್ರಾಂಶುಪಾಲರು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಿರಿ ಎಂದು ಮನವಿ ಮಾಡಿದ್ದರು.
ಆದರೆ ವಿದ್ಯಾರ್ಥಿನಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಲೇಜಿನ ಹೊರಾಂಗಣದಲ್ಲಿ ನಿಂತಿದ್ದರು. ಕೊನೆಗೆ ಕಂಕನಾಡಿ ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಮಾತುಕತೆ ನಡೆಸಿದ್ದರು. ಮಂಗಳವಾರವೂ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ಬಂದಿದ್ದು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.
ಮೂವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ. ಆದರೆ 32 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸಾಗಿದ್ದಾರೆ.
ಸೋಮವಾರದಂದು ಇಕಾನಾಮಿಕ್ಸ್ ಮೂರನೇ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪರೀಕ್ಷೆಗೆ ಬರೆಯಲು ಅವಕಾಶ ನೀಡದೇ ನಿರಾಕರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆ ವಿರುದ್ಧ ಆರೋಪಿಸಿದ್ದರು.
ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಜಾಬ್ ಧಾರಿ ವಿದ್ಯಾರ್ಥಿನಿಯರು, ಇದುವರೆಗೆ ನಾವು ಎಲ್ಲಾ ಪರೀಕ್ಷೆಗಳಲ್ಲೂ ಹಿಜಾಬ್ ಧರಿಸಿ ಪರೀಕ್ಷೆ ಬರೆದಿದ್ದೇವೆ. ಆದರೆ ಏಕಾಏಕಿ ನಮ್ಮನ್ನು ಪರೀಕ್ಷೆ ಬರೆಯಲು ಇಂದು ಅವಕಾಶ ನೀಡಿಲ್ಲ. ನಮಗೆ ಎಲ್ಲಾ ಸೌಲಭ್ಯ ನೀಡುತ್ತೇವೆ ಎಂದು ನಮ್ಮ ಪ್ರವೇಶದ ಸಂದರ್ಭದಲ್ಲಿ ಹೇಳಿದ ಪ್ರಾಂಶುಪಾಲರು ಈಗ ನಮ್ಮನ್ನು ಮಾಸ್ಕ್ ಮತ್ತು ಸ್ಕಾರ್ಫ್ ಹಾಕಿ ಬರಬೇಡಿ ಎನ್ನುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಿನ್ನೆಯೂ ಪರೀಕ್ಷೆ ಬರೆಯಲೆಂದು ಹಿಜಾಬ್ ಧರಿಸಿಕೊಂಡು ಬಂದು, ಆಡಳಿತ ಮಂಡಳಿ ಅವಕಾಶ ನೀಡದ ಕಾರಣ ವಾಪಾಸ್ಸು ಹೋಗಿದ್ದಾರೆ.