ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ 200ನೇ ರಕ್ತದಾನ ಶಿಬಿರವು ರಿಪ್ ಶಿಪ್ ವರ್ಲ್ಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಕುಡ್ಲ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರಿನ ಬಲ್ಮಠದಲ್ಲಿರುವ ಕರ್ನಾಟಕ ಥಿಯೋಲೋಜಿಕಲ್ ಕಾಲೇಜು ಬಿಷಪ್ ಜತ್ತನ್ನ ಆಡಟೋರಿಯಂ ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾದ ಶಾಂತರಾಂ ಶೆಟ್ಟಿಯವರು ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ರಕ್ತಕ್ಕೆ ಯಾವುದೇ ಜಾತಿ, ಧರ್ಮ ಇಲ್ಲ. ರಕ್ತಕ್ಕೆ ಇರುವುದು ಒಂದೇ ಬಣ್ಣ. ಒಬ್ಬರ ಜೀವ ಉಳಿಸಲು ರಕ್ತವು ಶ್ರೇಷ್ಠ ಪಾತ್ರ ವಹಿಸುತ್ತದೆ ಎಂದರು. ನಂತರ ಮಾತನಾಡಿ ಸೈನಿಕರು ರಕ್ತದಾನಿಗಳು ಇಬ್ಬರೂ ಒಂದೇ. ಗಡಿಯಲ್ಲಿ ಕಾಯುವ ಯೋಧರು ಮತ್ತು ರಕ್ತದಾನ ಮಾಡುವವರು ಒಂದೇ ಸಮಾನ. ಅವರು ದೇಶವನ್ನು ಕಾಯಲು ರಕ್ತದಾನ ಮಾಡಿದರೆ, ಇವರು ದೇಹ ಕಾಯಲು ರಕ್ತದಾನ ಮಾಡುತ್ತಾರೆ ಎಂದು ಹೆಮ್ಮೆಯಿಂದ ಹೇಳಿದರು.
ನಂತರ ಮಾತನಾಡಿದ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಉಪಾಧ್ಯಕ್ಷ ಮೈಕಲ್ ವೇಗಸ್, 200ನೇ ರಕ್ತದಾನ ಶಿಬಿರ ಮಾಡುತ್ತಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ತಂಡವನ್ನು ಪ್ರಶಂಸಿಸುತ್ತಾ,ಸಂಸ್ಥೆಯನ್ನು ಪ್ರೊತ್ಸಾಹಿಸುವ ಸಲುವಾಗಿ ದೂರದ ಕೊಡಗಿನಿಂದ ನಾವು ಆಗಮಿಸಿದ್ದೇವೆ. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಗೆ ಬಹುದೊಡ್ಡ ರಕ್ತದ ಸಂಬಂಧವಿದೆ. ಕೊಡಗು ಭಾಗದ ರೋಗಿಗಳಿಗೆ ರಕ್ತದ ಅವಶ್ಯಕತೆ ಬಂದರೆ ನಮ್ಮ ಕರೆಗೆ ತಕ್ಷಣ ಸ್ಪಂಧಿಸುವುದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಹೋದರರು. ಮಂಗಳೂರು, ಸುಳ್ಯ, ಉಡುಪಿ ಭಾಗದಲ್ಲೂ ಮಾತ್ರವಲ್ಲದೇ ದೂರದ ಗಲ್ಫ್ ರಾಷ್ಟ್ರಗಳಲ್ಲಿಯೂ ರಕ್ತದಾನದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯುತ್ತಾರೆ ಎಂದು ಬ್ಲಡ್ ಹೆಲ್ಪ್ ಲೈನ್ ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಗೌರವ ಸಲಹೆಗಾರರಾದ ಮುಸ್ತಫ ದೆಮ್ಮೆಲೆ ಮಾತನಾಡಿ, ಮಾನವನಿಗೆ ಮಾನವನೇ ಸ್ವಾವಲಂಬಿ. ನಮ್ಮೊಳಗೇ ಯಾವುದೇ ಜಾತಿ ಧರ್ಮ ಅಡ್ಡಬಾರದೇ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಂಡರೆ ಯಾವುದೇ ತೊಡಕು ಬರಲು ಸಾಧ್ಯವಿಲ್ಲ. ನಮ್ಮ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಹೋದರರು ಕೇವಲ ರಕ್ತದಾನ ಮಾತ್ರವಲ್ಲದೇ, ಕೊರೋನ ಹಾಗೂ ಇನ್ನಿತರ ಸಂದರ್ಭದಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಸಂಸ್ಥೆಯ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಷರೀಫ್ ವಳಾಲ್ ಮತ್ತು ಮುನ್ನ ಕಮ್ಮರಡಿ ಆಗಮಿಸಿ ಶುಭಹಾರೈಸಿದರು. ಇದೇ ವೇಳೆ ಕೊಡಗು ಬ್ಲಡ್ ಡೋನರ್ಸ್ ವತಿಯಿಂದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜೀವದಾನಿಯಾದ 93 ಜನಸ್ನೇಹಿ ರಕ್ತದಾನಿಗಳು:
ಯಶಸ್ವಿ ರಕ್ತದಾನ ಶಿಬಿರದಲ್ಲಿ 94 ಮಂದಿ ಜನಸ್ನೇಹಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆಯುವ ಮೂಲಕ ವಿವಿಧ ರೋಗಕ್ಕೆ ತುತ್ತಾಗಿರುವ ರೋಗಿಗಳ ಜೀವವನ್ನು ಉಳಿಸುವ ಕಾರ್ಯದಲ್ಲಿ ಕೈ ಜೋಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಸ್ಚಿಯನ್ ಎಜ್ಯೂಕೇಷನ್ ಸೊಸೈಟಿ ಇದರ ಪ್ರಿನ್ಸಿಪಾಲರಾದ ಡಾ| ಎಚ್.ಎಂ ವಾಟ್ಸನ್, ಲಯನ್ಸ್ ಕ್ಲಬ್ ಕುಡ್ಲ ಇದರ ಅಧ್ಯಕ್ಷರಾದ ಶ್ರೀಧರ್ ರಾಜ್ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಜೆ.ಎನ್ ಭಟ್, ಪ್ರವೀಣ್ ಕುಮಾರ್, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷರಾದ ಖಲೀಲ್ ಕ್ರಿಯೇಟಿವ್, ಕಾರ್ಯದರ್ಶಿ ಸುಕುಮಾರ್, ಕೊಸ್ಟಲ್ ಫ್ರೆಂಡ್ಸ್ ಮಂಗಳೂರು(ರಿ) ಸದಸ್ಯರಾದ ನೌಫಲ್, ಸಲಾಂ ಸಮ್ಮಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರೂ, ರಿಪ್ಶಿಪ್ ವರ್ಲ್ಡ್ ವೆಂಚರ್ಸ್ ಕಂಪೆನಿಯ ಸಿಬ್ಬಂದಿ ವರ್ಗದವರೂ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅತೀ ವಿರಳವಾದ ಬಾಂಬೆ ಬ್ಲಡ್ ಗ್ರೂಪ್ ಗ್ರೂಪಿನ ರಕ್ತದ ಬೇಡಿಕೆ ಬಂದಾಗ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಮನವಿಗೆ ಸದಾ ಸ್ಪಂದಿಸುತ್ತಾ ತನ್ನೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ನಿರಂತರವಾಗಿ ರಕ್ತದಾನ ಮಾಡಿ ಜೀವದಾನಿಯಾಗುವ ಬೆನ್ನಿ ಸೆಬಾಸ್ಟಿಯನ್ ರನ್ನು
(ಗೋಲ್ಡನ್ ಡೋನರ್ ಓ ಪಾಸಿಟಿವ್ ಬಾಂಬೆ ಗ್ರೂಪ್ ) ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ರಿಪ್ ಶಿಪ್ ವರ್ಲ್ಡ್ ವೆಂಚರ್ಸ್ ಕಂಪೆನಿಯ ಸಹ ಸಂಸ್ಥಾಪಕರಾದ ಪಾಲ್ದೊರಾಯ್ ರವರು ಸ್ವಾಗತಿಸಿ ನಿರೂಪಣೆ ಮಾಡಿದರು. ಮ್ಯಾನೇಜಿಂಗ್ ಡೈರೆಕ್ಟರ್ ರಿಪ್ಸನ್ ಜೆರೆಮಿಯಾ ವಂದಿಸಿದರು.