ಮುಂಬೈ: ‘ರನ್ ಮೆಶಿನ್’ ಖ್ಯಾತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ, ಕಳಪೆ ಬ್ಯಾಟಿಂಗ್ ಮುಂದುವರಿದಿದ್ದು, ಐಪಿಎಲ್ 2022ರಲ್ಲಿ ಸತತ ಎರಡನೇ ಪಂದ್ಯದಲ್ಲೂ ‘ಗೋಲ್ಡನ್ ಡಕ್’ಗೆ ಔಟ್ ಆಗಿದ್ದಾರೆ.
ಶನಿವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮಾರ್ಕೊ ಜಾನ್ಸೆನ್ ಎಸೆತದಲ್ಲಿ ಏಡನ್ ಮಾರ್ಕರಮ್ಗೆ ಕ್ಯಾಚಿತ್ತು ಕೊಹ್ಲಿ ನಿರ್ಗಮಿಸಿದರು.
ಈ ಹಿಂದೆ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ವಿರಾಟ್ ಸೊನ್ನೆ ಸುತ್ತಿದ್ದರು.
ಅಂತರರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ವಿರಾಟ್ ಕಳಪೆ ಆಟ ಮುಂದುವರಿದಿದೆ.
ಪಂಜಾಬ್ ವಿರುದ್ಧ ಮೊದಲ ಪಂದ್ಯದಲ್ಲಿ ಅಜೇಯ 41 ರನ್ ಗಳಿಸಿದ್ದ ಕೊಹ್ಲಿ ಕೋಲ್ಕತ್ತ ವಿರುದ್ಧ 12 ಹಾಗೂ ರಾಜಸ್ಥಾನ್ ವಿರುದ್ಧ 5 ರನ್ನಿಗೆ ಔಟ್ ಆಗಿದ್ದರು.
ಮುಂಬೈ ವಿರುದ್ಧ ನಾಲ್ಕನೇ ಪಂದ್ಯದಲ್ಲಿ 48 ರನ್ ಗಳಿಸಿ ಭರವಸೆ ಮೂಡಿಸಿದ್ದ ವಿರಾಟ್, ಚೆನ್ನೈ ವಿರುದ್ಧ 1 ಹಾಗೂ ಡೆಲ್ಲಿ ವಿರುದ್ಧ 12 ರನ್ನಿಗೆ ವಿಕೆಟ್ ಒಪ್ಪಿಸಿದ್ದರು.
ಈಗ ಏಳು ಹಾಗೂ ಎಂಟನೇ ಪಂದ್ಯಗಳಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆಗಿ ನಿರಾಸೆ ಮೂಡಿಸಿದ್ದಾರೆ.
ಈ ಮೂಲಕ ಎಂಟು ಪಂದ್ಯಗಳಲ್ಲಿ 119 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.