ನವದೆಹಲಿ: ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಕನಸಿರುವ ಮಹಿಳೆಯರಿಗೆ ಸೌದಿ ಅರೇಬಿಯಾ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಮಹಿಳೆಯರು ಮೆಹ್ರಾಮ್(ಪುರುಷ ಒಡನಾಡಿ) ಇಲ್ಲದೆಯೇ ಹಜ್ ಅಥವಾ ಉಮ್ರಾ ಯಾತ್ರೆ ಕೈಗೊಳ್ಳಬಹುದು!
ಸೌದಿಯ ಹಜ್ ಮತ್ತು ಉಮ್ರಾ ಸೇವೆಗಳ ಸಲಹೆಗಾರ ಅಹ್ಮದ್ ಸಲೇಹ್ ಹಲಾಬಿ ಅವರು ಈ ಘೋಷಣೆ ಮಾಡಿದ್ದಾರೆ. ಅದರಂತೆ, ಇನ್ನು ಪುರುಷ ಒಡನಾಡಿಯಿಲ್ಲದೆ, ಮಹಿಳೆಯರು ಯಾತ್ರೆ ಕೈಗೊಳ್ಳಬಹುದು. ಯಾತ್ರೆಗೆಂದು ಬರುವ ಎಲ್ಲ ಮಹಿಳೆಯರಿಗೂ ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ಒದಗಿಸುವ ಉದ್ದೇಶದಿಂದ ಎಲ್ಲ ಮಾದರಿಯ ಸಾರಿಗೆ ವ್ಯವಸೆœಗಳು, ಬಂದರುಗಳು ಸೇರಿದಂತೆ ಸೌದಿ ಅರೇಬಿಯಾದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಈ ಮೂಲಕ, ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳಲು ಮೆಹ್ರಾಮ್‌ನ ಅಗತ್ಯವಿದೆಯೇ ಎಂಬ ಚರ್ಚೆಗೆ ಸೌದಿ ಸರ್ಕಾರ ತೆರೆ ಎಳೆದಿದೆ.
ಕೆಲವು ಮಹಿಳೆಯರು ಕಠಿಣವಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ. ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅಂಥವರಿಗೆ ಪುರುಷ ಒಡನಾಡಿಯೊಂದಿಗೆ ಯಾತ್ರೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಮೆಹ್ರಾಮ್‌ನನ್ನು ಹುಡುಕುವುದು ಕಷ್ಟವಾದರೆ, ಇನ್ನು ಕೆಲವರಿಗೆ ಪುರುಷ ಒಡನಾಡಿಯೊಂದಿಗೆ ಯಾತ್ರೆ ಕೈಗೊಳ್ಳುವುದು ದುಬಾರಿಯಾಗುತ್ತದೆ. ಇದೆಲ್ಲವನ್ನು ಮನಗಂಡು ಇಂಥ ನಿರ್ಧಾರ ಕೈಗೊಂಡಿದ್ದೇವೆ ಎಂದೂ ಅಹ್ಮದ್ ಹಲಾಬಿ ತಿಳಿಸಿದ್ದಾರೆ. ಭಾರತದಲ್ಲಿ 2019ರಿಂದಲೇ ಮೆಹ್ರಾಮ್ ಇಲ್ಲದೇ ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಈಜಿಪ್ಟ್ ರಾಜಧಾನಿ ಕೈರೋದಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಅಲ್-ರಬಿಯಾ ಈ ನಿರ್ಧಾರವನ್ನು ಪ್ರಕಟಿಸಿದರು. ಹಜ್ ಯಾತ್ರೆ ಮತ್ತು ಉಮ್ರಾಕ್ಕೆ ಬರುವ ಮಹಿಳೆಯರಿಗೆ ಈಗ ಯಾವುದೇ ಮಹರ್ಮ್ (ರಕ್ತ ಸಂಬಂಧ ಹೊಂದಿರುವ ಪುರುಷರು) ಬರಲು ಅವಕಾಶ ನೀಡವುದಿಲ್ಲ ಎಂದು ಅವರು ಹೇಳಿದರು. ಇದರೊಂದಿಗೆ ಹಜ್ ಮತ್ತು ಉಮ್ರಾ ಯಾತ್ರೆಗೆ ಮಹಿಳೆಯರು ಒಂಟಿಯಾಗಿ ಬರಬಹುದೇ ಎಂಬ ಚರ್ಚೆಗೆ ತೆರೆ ಬಿದ್ದಿದೆ.
ಕಳೆದ ವರ್ಷಕ್ಕಿಂತ ಈಗ ಹೆಚ್ಚಿನ ರಿಯಾಯಿತಿ
ಕಳೆದ ವರ್ಷವೂ ಮಹ್ರಮ್ ಇಲ್ಲದೆ ಬರಲು ಅನುಮತಿ ನೀಡಲಾಗಿತ್ತು. ನಂತರ ಮಹಿಳೆಯರು ಇನ್ನೊಬ್ಬ ಮಹಿಳೆಯೊಂದಿಗೆ ಬರಬಹುದು. ಆದರೆ, ಈ ವರ್ಷದ ಆದೇಶದಲ್ಲಿ ಮಹಿಳೆಯರೂ ಒಂಟಿಯಾಗಿ ತೀರ್ಥಯಾತ್ರೆಗೆ ಬರಬಹುದು. ಸೌದಿ ಗೆಜೆಟ್ ಪ್ರಕಾರ, ಅಲ್-ರಬಿಯಾ ಅವರು ಯಾವುದೇ ರೀತಿಯ ವೀಸಾದೊಂದಿಗೆ ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಬರಬಹುದು ಎಂದು ಹೇಳಿದರು. ಉಮ್ರಾ ವೀಸಾಕ್ಕೆ ಯಾವುದೇ ಕೋಟಾ ಅಥವಾ ಸಂಖ್ಯೆಯ ಮಿತಿ ಇಲ್ಲ ಎಂದು ತಿಳಿಸಲಾಗಿದೆ.