ಶಿವಮೊಗ್ಗ : ರವಿವಾರ ನಡೆದ ಟಿಇಟಿ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿಯ ಫೋಟೋ ಬದಲು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಕಾಣಿಸಿಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.
ಕಳೆದ ರವಿವಾರ ಶಿವಮೊಗ್ಗದಲ್ಲಿ ನಡೆದ ಟಿಇಟಿ ಪರೀಕ್ಷೆ ವೇಳೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್ ನಲ್ಲಿ ಅಶ್ಲೀಲಾ ಫೋಟೋ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಎನ್ ಇಎಸ್ ನ ರುದ್ರಪ್ಪ ಕಾಲೇಜು ಪ್ರಾಂಶುಪಾಲ ಚನ್ನಪ್ಪ ಅವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ ಟಿಇಟಿ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿ ಬದಲು ಅಶ್ಲೀಲ ಫೋಟೊ ಅಪ್ಲೋಡ್ ಆಗಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ, ದೂರು ಆಧರಿಸಿ ಈಗಾಗಲೇ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಅಭ್ಯರ್ಥಿ ಬಳಿ ಮಾಹಿತಿ ಪಡೆಯಲಾಗಿದೆ, ಅರ್ಜಿ ಸಲ್ಲಿಕೆಗಾಗಿ ಬೇರೆಯವರಿಗೆ ಹೇಳಲಾಗಿತ್ತು ಎಂದು ಅಭ್ಯರ್ಥಿ ತಿಳಿಸಿದ್ದಾರೆ. ಅಭ್ಯರ್ಥಿಯ ಹೇಳಿಕೆ ಆಧರಿಸಿ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ಇಲಾಖೆಯಿಂದ ಸ್ಪಷ್ಟೀಕರಣ
ಇನ್ನು ಟಿಇಟಿ ಹಾಲ್ ಟಿಕೆಟ್ ನಲ್ಲಿ ಸನ್ನಿಲಿಯೋನ್ ಅಶ್ಲೀಲ ಚಿತ್ರ ಪ್ರಕಟ ಕುರಿತು ಸ್ಪಷ್ಟೀಕರಣ ನೀಡಿರುವ ಇಲಾಖೆ, ಪರೀಕ್ಷೆಯು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳಿಲ್ಲದೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿರುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಹೇಳಿದೆ.