ಹಾಸನ: ಫೇಸ್ಬುಕ್ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ಯುವಕನಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿ ಜೈಲು ಪಾಲಾದ ಘಟನೆ ಹಾಸನದಲ್ಲಿ ನಡೆದಿದೆ.ಬಂಧಿತಳನ್ನು ಚನ್ನರಾಯಪಟ್ಟಣದ ದಾಸರಹಳ್ಳಿ ನಿವಾಸಿ ಕೆ.ಆರ್ ಮಂಜುಳಾ ಎಂದು ಗುರುತಿಸಲಾಗಿದೆ.

ಫೇಸ್ಬುಕ್ ನಲ್ಲಿ ಸುಂದರವಾದ ಒಂದು ಹೆಣ್ಣಿನ ಫೋಟೋ ಡಿ.ಪಿ ಗೆ ಹಾಕಿ ಯುವಕನೊಬ್ಬನನ್ನು ಬುಟ್ಟಿಗೆ ಹಾಕಿಕೊಂಡ ಗೃಹಿಣಿಯೋರ್ವಳು ತನ್ನ ಪತಿ ಬಸವರಾಜ ಜತೆ ಸೇರಿ ದಿನನಿತ್ಯ ಮೆಸೇಜ್ ಕರೆ ಮತ್ತು ನಗ್ನ ವಿಡಿಯೋ ಕರೆ ಮುಕಾಂತರ ಪುಸಲಾಯಿಸಿ ಗೃಹಿಣಿ ಯುವಕನಿಂದ ಬರೋಬ್ಬರಿ 39 ಲಕ್ಷ ರೂಗಳನ್ನು ವಂಚಿಸಿಕೊಂಡಿದ್ದಾಳೆ.
ಪ್ರತಿ ಬಾರಿಯೂ ನಗ್ನ ಕರೆಗಳ ರೆಕಾರ್ಡ್ ಗಳನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ನೀಡದಿದ್ದರೆ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿಯೂ ಹೇಳಿದ್ದಳು.ಅಷ್ಟಕ್ಕೂ ವಂಚನೆಗೊಳಗಾದ ಯುವಕನನ್ನು ವಿಜಯಪುರದ ಬಗಳೂರು ನಿವಾಸಿ ಪರಮೇಶ್ವರ ನಾನಾ ಗೌಡ ಹಿಪ್ಪರಗಿ ಎಂದು ಗುರುತಿಸಲಾಗಿದೆ.
ಮತ್ತೆ ಮತ್ತೆ ಹಣಕ್ಕಾಗಿ ಮಹಿಳೆಯ ಕಿರುಕುಳ ಮತ್ತಷ್ಟು ಹೆಚ್ಚಾಗುತ್ತಲೇ ಹೋದಾಗ ಹತ್ತಿರದ ಸೈಬರ್ ಕ್ರೈಂ ಪೊಲೀಸರಿಗೆ ಯುವಕ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದಾಗ ಫೇಸ್ಬುಕ್ ಗೆಳತಿಯಾಗಿ ಚಾಟಿಂಗ್ ನಲ್ಲಿದ್ದ ಮಹಿಳೆ ಮಂಜುಳಾ ಪೊಲೀಸರ ಅತಿಥಿಯಾಗಿದ್ದಾಳೆ.
ಪತ್ನಿಯ ಜೊತೆ ಸಹಕರಿಸುತ್ತಿದ್ದ ಮತ್ತೋರ್ವ ಆರೋಪಿ ಬಸವರಾಜ ಸ್ವಾಮಿ ತಲೆ ಮರೆಸಿಕೊಂಡಿದ್ದಾನೆ.
ಇದೀಗ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪೊಲೀಸರು ಮಂಜುಳಾರ ಮನೆಗೆ ದಾಳಿ ನಡೆಸಿ 39 ಲಕ್ಷ ರೂ ಗಳಿಂದ ಖರೀದಿಸಿದ್ದ ಕಾರು, ಒಂದು ಬೈಕ್ ಚಿನ್ನಾಭರಣ ಸಹಿತ ಬ್ಯಾಂಕ್ ಖಾತೆಯಲ್ಲಿದ್ದ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಮಟ್ಟುಗೋಲು ಹಾಕಿದ್ದಾರೆ ಎಂದು ತಿಳಿದುಬಂದಿದೆ.