ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ನೀಡಿದ ಚಾಕ್ಲೇಟ್ ಅನ್ನು ತಿಂದು 17 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಶನಿವಾರ ನಡೆದಿದೆ. ಮಕ್ಕಳಿಗೆ ಚಾಕ್ಲೆಟ್ ನೀಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, ನಗರದ ಉತ್ತರ ಅಂಬಾಝರಿ ರಸ್ತೆಯಲ್ಲಿರುವ ಮದನ್ ಗೋಪಾಲ್ ಪ್ರೌಢಶಾಲೆಯ 3ನೇ, 4ನೇ ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳು ಊಟದ ಬಿಡುವಿನ ವೇಳೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳಿಗೆ ಚಾಕ್ಲೆಟ್ ಅನ್ನು ವಿತರಿಸಿದ್ದಾನೆ.
ವ್ಯಕ್ತಿ ತನ್ನ ಹುಟ್ಟುಹಬ್ಬ ಎಂದು ಹೇಳಿ ಮಕ್ಕಳಿಗೆ ಚಾಕ್ಲೆಟ್ ಹಂಚಿದ್ದಾನೆ. ಚಾಕ್ಲೆಟ್ ಸೇವಿಸಿದ 1 ಗಂಟೆಯೊಳಗೆ 17 ವಿದ್ಯಾರ್ಥಿಗಳಿಗೆ ಎದೆನೋವು ಕಂಡುಬಂದಿದ್ದು, ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಅಸ್ವಸ್ಥ ಮಕ್ಕಳನ್ನು ಸೀತಾಬುಲ್ಡಿಯ ಲತಾ ಮಂಗೇಶ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು.
ತಮಗೆ ಚಾಕ್ಲೆಟ್ ನೀಡಿದ ವ್ಯಕ್ತಿ ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದು, ಮಾಸ್ಕ್ ಧರಿಸಿದ್ದ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸೀತಾಬುಲ್ಡಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಹಿಡಿಯಲು ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಸದ್ಯ ಅಸ್ವಸ್ತರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.