ಮಂಗಳೂರು: ಪ್ರತಿಷ್ಠಿತ ವೈದ್ಯರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇರಿದಂತೆ ನಿಷೇಧಿತ ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬುಧವಾರ 10 ಮಂದಿಯನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 13ಕ್ಕೇರಿದೆ.
ಗಾಂಜಾ ಕೇಸ್ನಲ್ಲಿ 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಹಾಗೂ ಗಾಂಜಾ ಪೆಡ್ಲರ್ಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ವೈದ್ಯರು, ವಿದ್ಯಾರ್ಥಿಗಳು KMC ಅತ್ತಾವರ, KMC ಮಣಿಪಾಲ, ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜ್ನವರಾಗಿದ್ದಾರೆ.
ಹಣ್ಣಿನಂಗಡಿಯಲ್ಲಿ ಕೆಲಸ ಮಾಡುವ 23 ವರ್ಷದ ಮೊಹಮ್ಮದ್ ಅಫ್ರಾರ್, ಖಾಸಗಿ ಕಾಲೇಜಿನ ಅಂತಿಮ ವರ್ಷದ ಫಾರ್ಮಾ ಡಿ ವಿದ್ಯಾರ್ಥಿ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಅಂತಿಮ ವರ್ಷದ ಪತಾಲಜಿ ಎಂಡಿ ವಿದ್ಯಾರ್ಥಿ ತುಮಕೂರು ಮೂಲದ ಹರ್ಷ ಕುಮಾರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ನೀಲ್ ಕಿಶೋರಿಲಾಲ್ ರಾಮ್‌ಜಿ ಶಾ ಯನೈಟೆಡ್ ಕಿಂಗ್‌ಡಮ್ ರಾಷ್ಟ್ರದ ಪ್ರಜೆಯಾಗಿದ್ದು 15 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾನೆ. ಈತ ಡೆಂಟಲ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದು ಕೋರ್ಸ್ ಪೂರ್ಣಗೊಳಿಸಿಲ್ಲ. ಈತ ನಗರದ ಫ್ಲ್ಯಾಟ್‌ನಲ್ಲಿ ಗಾಂಜಾ ಹೊಂದಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಆತನಿಂದ 2 ಕೆಜಿ ಗಾಂಜಾ ಸ್ವಾಧೀನಪಡಿಸಿಕೊಂಡಿದ್ದರು.
ಆತನನ್ನು ವಿಚಾರಣೆಗೊಳಪಡಿಸಿದಾಗ ಉಳಿದ ಆರೋಪಿಗಳ ಮಾಹಿತಿ ಲಭಿಸಿದೆ. ಉಳಿದ ಆರೋಪಿಗಳನ್ನು ವಿವಿಧ ಹಾಸ್ಟೆಲ್, ಪಿಜಿ ಹಾಗೂ ಖಾಸಗಿ ನಿವಾಸಗಳಿಂದ ವಶಕ್ಕೆ ಪಡೆದು, ಗಾಂಜಾ ಹಾಗೂ 9 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ನೀಲ್ ಕಿಶೋರಿ ಲಾಲ್‌ನಿಂದ 2 ಕೆಜಿಗೂ ಅಧಿಕ ಗಾಂಜಾ, ಆಟಿಕೆ ಪಿಸ್ತೂಲು, ಒಂದು ಡ್ರ್ಯಾಗನ್, ಮೊಬೈಲ್ ಮತ್ತಿತರ ಕೆಲವು ಪರಿಕರಗಳು ದೊರೆತಿವೆ.
ಈ ಘಟನೆ ನಂತರ ಮಂಗಳೂರಿಗೆ ಮೆಡಿಕಲ್ ವಿದ್ಯಬ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಚಿಂತೆ ಆರಂಭವಾಗಿದೆ. ಮತ್ತಿನಲ್ಲಿ ಅದೆಂಥಾ ಚಿಕಿತ್ಸೆ ಕೊಡುತ್ತಾರೆ ಎನ್ನುವ ಆತಂಕದಲ್ಲಿ ರೋಗಿಗಳಿದ್ದಾರೆ. ತನಿಖೆ ಬಳಿಕ ಇನ್ನೂ ಯಾವೆಲ್ಲ ವಿಚಾರ ಹೊರಬರುತ್ತವೆ ಎಂದು ಕಾದು ನೋಡಬೇಕಿದೆ.