ಮಂಗಳೂರು: ಕೆಲಸ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಜಾಹಿರಾತನ್ನು ನಂಬಿ ಮಾರು ಹೋಗುವ ಮುನ್ನ ಯುವಕರೇ ಎಚ್ಚರವಾಗಿರಿ. ಏಕೆಂದರೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೇ ಹಣವನ್ನು ದೋಚಿ ವಂಚಿಸುವ ಸಾಧ್ಯತೆ ಇರುತ್ತದೆ.
ಹೌದು ಬಂಟ್ವಾಳದ ವೀರಕಂಭ ಗ್ರಾಮದ ನಿವಾಸಿ, ಓರ್ವ ಯುವಕನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 9.79 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
ಫೇಸ್ಬುಕ್ ಜಾಹಿರಾತು ನಂಬಿ ಯುವಕ ಕಳೆದುಕೊಂಡ 9.79 ಲಕ್ಷ ರೂ:
ಸಂತ್ರಸ್ತ ವ್ಯಕ್ತಿ ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಈತ ವರ್ಕ್ ಫ್ರಂ ಹೋಮ್ನಲ್ಲಿದ್ದನು. ಹೀಗಿರುವಾಗಲೇ ಯುವಕ ಫೇಸ್ಬುಕ್ನಲ್ಲಿ (Facebook) ಕೆಲಸಕ್ಕೆ ಬೇಗಾಗಿದ್ದಾರೆ ಎಂಬ ಜಾಹಿರಾತನ್ನು ನೋಡಿದ್ದಾನೆ. ನಂತರ ಜಾಹಿರಾತು ನೀಡಿದವರಿಗೆ 2022 ಡಿಸೆಂಬರ್ 18 ರಂದು ವಾಟ್ಸ್ಆ್ಯಪ್ ಮೂಲಕ ಸಂಪರ್ಕ ಮಾಡಿದ್ದಾನೆ. ನಂತರ ಆರೋಪಿ ಕೆಲಸದ ಫಾರ್ಮ್ನ್ನು ತುಂಬುವಂತೆ ಸಂತ್ರಸ್ತನಿಗೆ ಕಳುಹಿಸಿದ್ದಾರೆ.
ನಂತರ ಆರೋಪಿ, ಯುವಕನಿಂದ ವಿವಿಧ ಬ್ಯಾಂಕ್ ಅಕೌಂಟ್ಗಳಿಗೆ ವೀಸಾ ಕೆಲಸಕ್ಕಾಗಿ ಹಣ ಹಾಕಿಸಿಕೊಂಡಿದ್ದಾನೆ. ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಇತರ ಬದಲಾವಣೆಗಾಗಿ ಹಣ ಪಡೆದಿದ್ದಾನೆ. ಯುವಕ ಹಣವನ್ನು ಎಟಿಎಂ ಮೂಲಕ, ಫೋನ್ ಪೇ ಮತ್ತು ಪೇಟಿಂ ಮೂಲಕ ಒಟ್ಟು ಬರೋಬ್ಬರಿ 9.79 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ.
ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿಯ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.