ಬೆಂಗಳೂರು: ಸೌದಿ ಅರೇಬಿಯಾದ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾಗಿ ಕರ್ನಾಟಕ ಮೂಲದ ಐವರು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಲಬುರಗಿಯ ನೂರ್ ಬಾಗ್ ನಿವಾಸಿ ಶಫೀದ್ ಹುಸೈನ್ ಸುಲ್ಲದ್, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಝೈನುದ್ದೀನ್ ಸಾಹೇಬ್, ರೆಹನಾ ಬೇಗಮ್, ಬಡೇಜಾನ್ ಸುಲ್ಲದ್, ಸಿರಾಜ್ ಬೇಗಮ್ ಸುಲ್ಲದ್, ಸಮೀರ್ ಸುಲ್ಲದ್ ಮೃತಪಟ್ಟವರು ಎಂದು ತಿಳಿದುಬಂದಿದೆ.
ಇವರು ಸಾಲಿಹೀನ್ ಎಂಬ ಹಜ್ ಮತ್ತು ಉಮ್ರಾ ಟೂರ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಮೂಲಕ ಪವಿತ್ರ ಮಕ್ಕಾ ಮತ್ತು ಮದೀನಾ ಪ್ರವಾಸ ಕೈಗೊಂಡಿದ್ದರು. ಉಮ್ರಾ ನಿರ್ವಹಿಸಿ ನಿನ್ನೆ ರಾತ್ರಿ ಬಸ್ ಮೂಲಕ ಮದೀನಾಕ್ಕೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಬಸ್ ಮಕ್ಕಾದಿಂದ 250 ಕಿ.ಮೀ.ದೂರದಲ್ಲಿ ಮುಂದೆ ಚಲಿಸುತ್ತಿದ್ದ ಟ್ರಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ ಕಾರೊಂದು ಒಂಟೆಗಳಿಗೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಯುವಕರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದರು.
ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.