ಮಂಗಳೂರು: ಸಾಮಾಜಿಕ ಜಾಲ ತಾಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಂನಲ್ಲಿ ಸ್ನೇಹ ಮಾಡಿಕೊಂಡು ಅದನ್ನು ದುರ್ಬಳಕೆ ಮಾಡಿಕೊಂಡು 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಸ್ ಚಾಲಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಮಂಗಳೂರು ನ್ಯಾಯಾಲಯ ಮಹತ್ವದ ತೀರ್ಪು ನೀಡಿದ ಬಗ್ಗೆ ವರದಿಯಾಗಿದೆ.

ಘಟನೆಯ ಬಗ್ಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಪೋಕ್ರೋ ನ್ಯಾಯಾಧೀಶ ಕೆ. ಎಂ. ರಾಧಾಕೃಷ್ಣರವರು ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆಂದು ತಿಳಿದು ಬಂದಿದೆ.
ಕಾವೂರು ಮರಕಡ ನಿವಾಸಿ ದಯಾನಂದ ದಾನಣ್ಣವರ್ ಅಲಿಯಾಸ್ ದಯಾನಂದ (30) ಎಂಬಾತ ಅಪರಾಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಮಣ ಸ್ವಾಮಿ ಈ ಪ್ರಕರಣದಲ್ಲಿ ಬಾಲಕಿ ಪರವಾಗಿ ವಾದಿಸಿದ್ದಾರೆಂದು ತಿಳಿದು ಬಂದಿದೆ.
ಸಂಪೂರ್ಣ ಘಟನೆಯ ವಿವರ: ಆರೋಪಿಯಾದ ದಯಾನಂದ 13 ವರ್ಷದ ಬಾಲಕಿಯೊಂದಿಗೆ ಇನ್ಸ್‌ಟಾಗ್ರಾಂ ಮೂಲಕ ಸ್ನೇಹ ಬೆಳೆಸಿಕೊಂಡಿದ್ದು ಪರಸ್ಪರ ಚಾಟ್ ಕೂಡ ಮಾಡುತ್ತಿದ್ದರು.
ಜನವರಿ 27, 2022 ರಂದು, ಅವಳಿಗೆ ಕರೆ ಮಾಡಿ ತನ್ನೊಂದಿಗೆ ಸುತ್ತಾಡಲು ಬರುವಂತೆ ಆಹ್ವಾನಿಸಿದ್ದಾನೆ. ಆದರೆ ಇದನ್ನು ಬಾಲಕಿ ನಿರಾಕರಿಸಿದ್ದಾಳೆ.
ಹೇಗಾದರು ಮಾಡಿ ಬಾಲಕಿಯ ಜೊತೆ ತನ್ನ ಚಪಲ ತೀರಿಸಿಕೊಳ್ಳಲು ಟಾರ್ಗೆಟ್ ಹಾಕಿಕೊಂಡಿದ್ದ ಬಸ್ ಚಾಲಕ ಮರುದಿನ ತನ್ನೊಂದಿಗೆ ಬರುವಂತೆ ಅವಳನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದ.
ಅವಳು ಬಸ್ ನಿಲ್ದಾಣದ ಬಳಿ ಬಂದಾಗ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಹಂಪನಕಟ್ಟೆಯ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅವಳನ್ನು ಅವಳ ಮನೆಯ ಬಳಿ ಬಿಟ್ಟು ಹೋಗಿ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದ. ಇದಾದ ನಂತರ ಘಟನೆಯ ಬಗ್ಗೆ ತಿಳಿದ ಬಾಲಕಿಯ ಪೋಷಕರು ಮರುದಿನ ಪೊಲೀಸರಿಗೆ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತದನಂತರ ನಡೆದ ಬೆಳವಣಿಗೆಯಲ್ಲಿ ಕೊನೆಗೆ ಬಸ್ ಚಾಲಕ ಇಪ್ಪತ್ತು ವರ್ಷ ಜೈಲುವಾಸ ಅನುಭವಿಸಬೇಕಾಗಿ ಬಂತು. ಇದನ್ನರಿತಾದರು ಸಾಮಾಜಿಕ ಜಾಲ ತಾಣಗಳನ್ನು ದುರ್ಬಳಕೆ ಮಾಡಿಕೊಂಡು ಇಸ್ಟಾಗ್ರಾಂನಲ್ಲಿ ಹುಡುಗಿಯರ ಜೊತೆ ಚಾಟ್ ಮಾಡುವ ಯುವಕರು ಎಚ್ಚರ ವಹಿಸುವುದು ಒಳ್ಳೆಯದು.ಇಲ್ಲದಿದ್ದಲ್ಲಿ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸಲು ತಯಾರಾಗುವುದು ಒಳಿತು.