ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಬುಧವಾರ ಆಗಿರುವುದರಿಂದ ಗುರುವಾರದಿಂದ ರಮಝಾನ್ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಹಿಂದೂಗಳ ಹೊಸ ವರ್ಷ ಎಂದೇ ಕರೆಯಲ್ಪಡುವ ಯುಗಾದಿಹಬ್ಬ ಮುಗಿಯುತ್ತಿದ್ದಂತೆ ಮುಸ್ಲಿಮರ ಪವಿತ್ರ ರಂಜಾನ್ ಆರಂಭವಾಗಿದೆ. ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ ಕಾಣಿಸಿಕೊಂಡಿದ್ದು, ಮುಸ್ಲಿಂ ಬಾಂಧವರು ಉಪವಾಸ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಕಳೆದ ವರ್ಷ ಕೊರೊನಾ 2ನೇ ಅಲೆಯಿಂದಾಗಿ ಮನೆ-ಮನೆಗೆ ಸೀಮಿತಗೊಳಿಸಿದ್ದ ರಂಜಾನ್ ಪ್ರಾರ್ಥನೆಯನ್ನು ಈ ಬಾರಿ ಅದ್ಧೂರಿಯಿಂದ ಆಚರಿಸುವ ಉತ್ಸಾಹದಲ್ಲಿದ್ದಾರೆ. ಅದಕ್ಕಾಗಿ ಮಾರುಕಟ್ಟೆಗಳಿಗೆ ಇಂದಿನಿಂದಲೇ ಭೇಟಿ ನೀಡುತ್ತಿದ್ದು, ಮುಸ್ಲಿಂ ಬಾಂಧವರು ತಮಗಿಷ್ಟದ ಉಡುಪು, ಅಲಂಕಾರಿಕ ವಸ್ತುಗಳು, ಮಹಿಳೆಯರು ಕುರ್ತಾ, ಬುರ್ಕಾ ಹಬ್ಬದ ಅಡುಗೆಗೆ ಬೇಕಾದ ದಿನಸಿ, ಕರ್ಜೂರ, ಬಾದಾಮಿ ಹೀಗೆ ನೆಚ್ಚಿನ ಸಿಹಿ ತಿನಿಸುಗಳನ್ನೂ ಖರೀದಿಸಲು ಸಜ್ಜಾಗುತ್ತಿದ್ದಾರೆ.
ಈ ತಿಂಗಳು ದಾನ-ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಲಭಿಸುತ್ತದೆ. ಶ್ರೀಮಂತರು ಮತ್ತು ಉಳ್ಳವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್ (ದಾನ) ರೂಪದಲ್ಲಿ ಬಡವರಿಗೆ ನೀಡುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ.
ಸಹ್ರಿಯಿಂದ ಇಫ್ತಾರ್ ವರೆಗೆ
ಉಪವಾಸವೂ ಸಹ್ರಿಯಿಂದ ಆರಂಭವಾಗಿ ಇಫ್ತಾರ್‌ನೊಂದಿಗೆ ಕೊನೆಗೊಳ್ಳುತ್ತದೆ. ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮುನ್ನ ಸೇವಿಸುವ ಆಹಾರಕ್ಕೆ ಸಹ್ರಿ ಎನ್ನುವರು. ಮನೆಗಳಲ್ಲಿ ಇಫ್ತಾರ್‌ಗೆ ಖರ್ಜೂರ, ಹಣ್ಣುಗಳು ಮತ್ತು ಹಣ್ಣಿನ ರಸ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಮಸೀದಿಗಳಲ್ಲೂ ಸಾಮೂಹಿಕ ಇಫ್ತಾರ್ ಆಯೋಜನೆ ನಡೆಯುತ್ತದೆ. ಇದರೊಂದಿಗೆ ಈ ಮಾಹೆಯಲ್ಲಿ ಅಲ್ಲಲ್ಲಿ ಸೌಹಾರ್ದ ಇಫ್ತಾರ್ ಕೂಟಗಳೂ ನಡೆಯುತ್ತವೆ. ಆದರೆ ಕೆಲಸ ಮಾಡುವ ಬೆರಳೆಣಿಕೆಯ ಮಂದಿ ಮಾತ್ರ ಉಪವಾಸವನ್ನು ರದ್ದುಗೊಳಿಸಿ, ಸಂಜೆ ವೇಳೆ ಪ್ರಾರಂಭವಾಗುವ ಸಾಮೂಹಿಕ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳುತ್ತಾರೆ.