ರಕ್ಷಾ ಬಂಧನದಂದು ತನ್ನನ್ನು ರಕ್ಷಿಸುವಂತೆ ಬೇಡಿ ಅಣ್ಣನ ಕೈಗೆ ತಂಗಿ ರಾಖಿ ಕಟ್ಟುತ್ತಾಳೆ, ಆದರೆ ತಂಗಿಯನ್ನು ರಕ್ಷಿಸಬೇಕಿದ್ದ ಕೈಯಿಂದ ಹತ್ಯೆ ನಡೆದಿದೆ. 12 ವರ್ಷದ ಬಾಲಕಿ ಮೊದಲ ಬಾರಿಗೆ ಋತುಮತಿಯಾಗಿದ್ದಳು, ಅದಕ್ಕೆ ಸಂತೋಷಪಡುವುದು ಬಿಟ್ಟು, ತಂಗಿ ಯಾರೊಂದಿಗೋ ಲೈಂಗಿಕ ಸಂಬಂಧ ಹೊಂದಿರಬಹುದು ಎಂದು ಆರೋಪಿಸಿ ಮೂರು ದಿನಗಳ ಕಾಲ ಥಳಿಸಿ ಹತ್ಯೆ ಮಾಡಿದ ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ಘಟನೆ ನಡೆದಿದೆ.
ಇದೆಲ್ಲಕ್ಕೂ ಆ ಬಾಲಕಿಯ ಅತ್ತಿಗೆಯೇ ಕಾರಣ ಎನ್ನಲಾಗಿದೆ. ಬಾಲಕಿಯ ರಕ್ತಸ್ರಾವಕ್ಕೆ ಕಾರಣ ಕೇಳಿದಾಗ ಸರಿಯಾಗಿ ವಿವರಿಸುವ ಬದಲು ಕುಮ್ಮಕ್ಕು ಕೊಟ್ಟು, ಆಕೆಯ ಮೇಲೆ ಕೋಪ ಬರುವಂತೆ ಮಾಡಿದ್ದಳು. ಕುಪಿತಗೊಂಡ ಸಹೋದರ ತಂಗಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಗಾಯಗೊಂಡ ಬಾಲಕಿಯನ್ನು ಉಲ್ಲಾಸ್ನಗರದ ಆಸ್ಪತ್ರೆಗೆ ಕೊಂಡೊಯ್ದಾಗ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮುಖ, ಬೆನ್ನು, ಕತ್ತಿನ ಮೇಲೆ ಗಾಯದ ಗುರುತುಗಳಿದ್ದವು, ಅತ್ಯಾಚಾರ ನಡೆದಿದೆಯೇ ಎಂದು ಪರೀಕ್ಷೆಗೊಳಪಡಿಸಿದಾಗ ಆಕೆ ಮೊದಲ ಬಾರಿಗೆ ಋತುಮತಿಯಾಗಿದ್ದಳು ಎಂಬುದು ತಿಳಿದುಬಂದಿದೆ. ಪೊಲೀಸರು ಅಣ್ಣನ ವಿರುದ್ಧ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿ ತನ್ನ ಅಣ್ಣ ಅತ್ತಿಗೆಯೊಂದಿಗೆ ವಾಸಿಸುತ್ತಿದ್ದಳು. ಅಪ್ಪ, ಅಮ್ಮ ಬೇರೆ ಊರಿನಲ್ಲಿದ್ದರು. ಅಣ್ಣ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ