ಹಾಸನ: ಅಪಘಾತ ಸಂಭವಿಸಿ ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಬಾರದೆ ನಡುರಸ್ತೆಯಲ್ಲೇ ಒದ್ದಾಡಿ ಯುವಕ ಪ್ರಾಣ ಬಿಟ್ಟ ಮನಕಲಕುವ ಘಟನೆ ಹಾಸನ ತಾಲೂಕಿನ ಬೇಲೂರು ರಸ್ತೆಯ ಕಲ್ಕೆರೆ ಗ್ರಾಮದ ಬಳಿ ತಡ ರಾತ್ರಿ ನಡೆದಿದೆ.
ಮೂಲತಃ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ಆನಂದ್ (30) ಮೃತ ದುರ್ದೈವಿ.
ಆನಂದ್ ಬೇಲೂರು ಕಡೆಯಿಂದ ಹಾಸನದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತವಾಗಿ ಒಂದು ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ಬಂದಿಲ್ಲ. ತೀವ್ರ ರಕ್ತಸ್ರಾವವಾಗಿ ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಒದ್ದಾಡಿ ನಡುರಸ್ತೆಯಲ್ಲೇ ಯುವಕ ಪ್ರಾಣಬಿಟ್ಟಿದ್ದಾನೆ.
ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಸ್ವಾಮಿ, ‘ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ. ಕರೆ ಮಾಡಿದ ಸಮಯ, ಆಂಬುಲೆನ್ಸ್ ಸ್ಥಳಕ್ಕೆ ತೆರಳಿದ ಸಮಯ, ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ವಿಳಂಬ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದ್ದಾರೆ.