ಬಾಲಿವುಡ್ನ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ನೈಜ ಘಟನೆ ಆಧಾರಿತ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಘಟನೆಯನ್ನು ಆಧರಿಸಿ ಮೂಡಿಬಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಭಾರೀ ಪರ-ವಿರೋಧ ವ್ಯಕ್ತವಾಗಿತ್ತು. ಈ ನಡುವೆ ನೆಟ್ಟಿಗರಿಂದ ವಿವೇಕ್ ಅಗ್ನಿಹೋತ್ರಿಗೆ ಒಂದು ಸವಾಲು ಎದುರಾಗಿದೆ. ಧೈರ್ಯ ಇದ್ದರೆ ಮಣಿಪುರದಲ್ಲಿ ನಡೆದ ಅಮಾನವೀಯ ಘಟನೆಗಳ ಕುರಿತು ಸಿನಿಮಾ ಮಾಡಿ ಎಂದು ನೆಟ್ಟಿಗರೊಬ್ಬರು ಸವಾಲು ಹಾಕಿದ್ದಾರೆ. ಅದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಣಿಪುರದಲ್ಲಿ ಯುವತಿಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ ಅಮಾನುಷ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ‘ಸಮಯ ವ್ಯರ್ಥ ಮಾಡಬೇಡಿ. ಗಂಡಸ್ತನ ಇದ್ದರೆ ಮಣಿಪುರ್ ಫೈಲ್ಸ್ ಅಂತ ಸಿನಿಮಾ ಮಾಡಿ’ ಎಂದು ಕಮೆಂಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ. ಇದನ್ನು ವಿವೇಕ್ ಅಗ್ನಿಹೋತ್ರಿ ಅವರು ನಿರ್ಲಕ್ಷಿಸಿಲ್ಲ. ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲ ಸಿನಿಮಾವನ್ನು ನನ್ನಿಂದಲೇ ಮಾಡಿಸುತ್ತೀರಾ? ನಿಮ್ಮ ಟೀಮ್ ಇಂಡಿಯಾದಲ್ಲಿ ಗಂಡಸ್ತನ ಇರುವ ಫಿಲ್ಮ್ ಮೇಕರ್ ಯಾರೂ ಇಲ್ಲವೇ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಮರುಪ್ರಶ್ನೆ ಹಾಕಿದ್ದಾರೆ. ಇದರಲ್ಲಿ ಅವರು ಬಳಸಿರುವ ಇಂಡಿಯಾ ಎಂಬ ಪದದ ಬಗ್ಗೆ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಪ್ರತಿಪಕ್ಷಗಳೆಲ್ಲ ಸೇರಿ ‘ಇಂಡಿಯಾ’ ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಅದರ ಹಿನ್ನೆಲೆಯಲ್ಲೇ ವಿವೇಕ್ ಅಗ್ನಿಹೋತ್ರಿ ಈ ಪದವನ್ನು ಬಳಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಲಾಗದೇ ಉಳಿದಿರುವ ಅನೇಕ ವಿಷಯಗಳನ್ನು ‘ದಿ ಕಾಶ್ಮೀರ್ ಫೈಲ್ಸ್ ಅನ್ರಿಪೋರ್ಟೆಡ್’ ವೆಬ್ ಸರಣಿ ಮೂಲಕ ತೋರಿಸಲು ವಿವೇಕ್ ಅಗ್ನಿಹೋತ್ರಿ ಮುಂದಾಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವೆಬ್ ಸಿರೀಸ್ನ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಜೀ5 ಒಟಿಟಿ ಮೂಲಕ ಇದು ಬಿಡುಗಡೆ ಆಗಲಿದೆ. ಅದರ ಜೊತೆಗೆ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಾಗಿಯೂ ವಿವೇಕ್ ಅಗ್ನಿಹೋತ್ರಿಯ ಅಭಿಮಾನಿಗಳು ಕಾದಿದ್ದಾರೆ.