ಹಾಸನ: ನಕಲಿ ಚಿನ್ನ ಮಾರಾಟ ಮಾಡಿ 12 ಲಕ್ಷ ಹಣ ದೋಚಿದ್ದ ಆರೋಪಿಯನ್ನು ಹಾಸನ ಜಿಲ್ಲೆ ಹಳೇಬೀಡು ಪೊಲೀಸರು ಬಂಧಿಸಿದ್ದಾರೆ.
ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಬೇದರ್ ಲಾಲ್ ಬಂಧಿತ ಆರೋಪಿ. ಉಳಿದ ಆರೋಪಿಗಳಾದ ಅರ್ಜುನ್, ಕೀರ್ತಿ, ಶಿವಕುಮಾರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ತಮಗೆ ಚಿನ್ನದ ನಿಧಿ ಸಿಕ್ಕಿದೆ. ಇದನ್ನು ಮಾರಾಟ ಮಾಡಿದರೆ ನಿಮಗೂ ಹಣ ಕೊಡುತ್ತೇವೆ ಎಂದು ಹಗರೆ ಗ್ರಾಮದ ಜಯಣ್ಣರಿಗೆ ಖದೀಮರು ದುಂಬಾಲು ಬಿದ್ದಿದ್ದರು. ಲಾಭದ ಆಸೆಗೆ ಮಾರು ಹೋಗಿದ್ದ ಜಯಣ್ಣ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ದೇವರಡ್ಡಿ ಗ್ರಾಮದ ಸೋಮಶೇಖರ್ ರೆಡ್ಡಿ ಜೊತೆ 12 ಲಕ್ಷಕ್ಕೆ ಮಾತುಕಥೆ ಮುಗಿಸಿದ್ದರು.
ಚಿನ್ನ ಪರಿಕ್ಷಿಸಲು ಜಯಣ್ಣನಿಗೆ ಎರಡು ಅಸಲಿ ಚಿನ್ನದ ಗುಂಡುಗಳನ್ನು ಸಹ ಖದೀಮರ ಗ್ಯಾಂಗ್ ನೀಡಿತ್ತು. ಕೂಡಲೇ ಉಳಿದ ಚಿನ್ನ ಪಡೆಯಲು 12 ಲಕ್ಷ ಹಣ ತೆಗೆದುಕೊಂಡು ಆರೋಪಿಗಳು ಹೇಳಿದ ಸ್ಥಳಕ್ಕೆ ಜಯಣ್ಣ ಬಂದಿದ್ದಾರೆ. ಈ ವೇಳೆ ಖದೀಮರು ನಕಲಿ ಚಿನ್ನದ ಗಂಟು ನೀಡಿದ್ದಾರೆ. ಅನುಮಾನಗೊಂಡು ಗಂಟನ್ನು ಬಿಚ್ಚಿ ನೋಡುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಿ 12 ಲಕ್ಷ ಹಣ ಕಿತ್ತುಕೊಂಡು ಖದೀಮರ ಗ್ಯಾಂಗ್ ಪರಾರಿಯಾಗಿತ್ತು. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಹಳೇಬೀಡು ಸಿಪಿಐ ಶ್ರೀಕಾಂತ್ ಹಾಗೂ ಪಿಎಸ್ ಗಿರಿಧರ್ ನೇತೃತ್ವದಲ್ಲಿ ತಂಡ ಇದೀಗ ಓರ್ವ ಆರೋಪಿ, ಹಣ ಮತ್ತು ನಕಲಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.