dtvkannada

ಬೆಂಗಳೂರು: ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕೋ, ಬೇಡವೋ..?ನೀಡುವುದಾದರೆ ಏನೆಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಅಂತಿಮ ತೀರ್ಮಾನ ಹೊರಬಿದ್ದಿದೆ.
ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್‌ಸಿಗ್ನಲ್ ಸಿಕ್ಕಿದ್ದು, 3 ದಿನ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ಕೊಡಲಾಗಿದೆ. ಆದರೆ, ಮೆರವಣಿಗೆಗೆ, ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಜ್ಞರಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ವೈರಾಲಜಿಸ್ಟ್ ಡಾ.ರವಿ, ಡಾ.ಸುದರ್ಶನ್, ಕಂದಾಯ ಸಚಿವ ಅಶೋಕ್, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಜತೆಗೆ ಗಣಪತಿ ಮೂರ್ತಿಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರ ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಿಯೇ ವಿಸರ್ಜಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ 3 ದಿನ ಮಾತ್ರ ಸರಳವಾಗಿ ಗಣೇಶೋತ್ಸವ ಇರಲಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೂ ಅದು ಸರಳವಾಗಿ ಇರಬೇಕು. ಅದ್ಧೂರಿ ಆಚರಣೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಸಂಘ, ಸಂಸ್ಥೆಗಳಿಂದ ಭಾರೀ ಒತ್ತಡ ಇದ್ದ ಹಿನ್ನೆಲೆಯಲ್ಲಿ ಅಂತಿಮವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದ ಅನುಮತಿ ಸಿಕ್ಕಿದೆಯಾದರೂ, ಬೀದಿಗೆ ಒಂದರಂತೆ ಗಣೇಶ ಪ್ರತಿಷ್ಠಾಪಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಬೇಕು, ಏರಿಯಾಗೆ ಇಂತಿಷ್ಟೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತದ ಅನುಮತಿ ಪಡೆಯಲೇಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!