ಬೆಂಗಳೂರು: ಒಂಟಿ ವೃದ್ಧನ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದವರನ್ನು ಬೆಳ್ಲಂದೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರು ಪೊಲೀಸರಿಂದ 6 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ನಿತಿನ್, ಹೃತಿಕ್, ರಾಜವರ್ಧನ್, ಅರುಣ್, ಮಹದೇವ್, ತೇಜಸ್ ಎಂಬವರನ್ನು ಬೆಳ್ಳಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 20 ರಂದು ಬೆಳ್ಳಂದೂರಿನಲ್ಲಿ ದರೋಡೆ ಪ್ರಕರಣ ನಡೆದಿತ್ತು. 62 ವರ್ಷ ವಯಸ್ಸಿನ ಲಕ್ಷ್ಮಣ್ ಎಂಬವರ ಮನೆಗೆ ರಾತ್ರಿ ನುಗ್ಗಿ ಆರೋಪಿಗಳು ದುಷ್ಕೃತ್ಯ ಎಸಗಿದ್ದರು. 40 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದರು. ಆರೋಪಿಗಳು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಟವರ್ ಡಂಪ್ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ.
ಘಟನೆಯ ವಿವರ: ವಯೋವೃದ್ದರು ಇರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರೋಪಿಗಳು ಆ.20 ರಂದು ಬೆಳ್ಳಂದೂರಿನ ಎಂಟನೇ ಕ್ರಾಸ್ ಬಳಿ ಲಕ್ಷ್ಮಣ್ ಎಂಬುವರ ಮನೆ ಗುರುತಿಸಿಕೊಂಡು ಬಾಗಿಲು ತಟ್ಟಿದ್ದಾರೆ. ಈ ವೇಳೆ ಯಾರೋ ಪರಿಚಯಸ್ಥರು ಅಂತ ತಿಳಿದ ವೃದ್ದ ಲಕ್ಷ್ಮಣ್ ಬಾಗಿಲು ತೆರೆಯುತ್ತಿದ್ದಂತೆ ಒಳ ನುಗ್ಗಿದ್ದಾರೆ.
ಮನೆಗೆ ನುಗಿದ ದರೋಡೆಕೋರರು ಲಕ್ಷ್ಮಣ್ ಎಂಬುವವರನ್ನು ಪ್ಲಾಸ್ಟಿಕ್ ಹಗ್ಗದಿಂದ ಕೈ-ಕಾಲು ಕಟ್ಟಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದ ಲಕ್ಷ್ಮಣ್ ಅವರ ಬಾಯಿಗೆ ಪ್ಲಾಸ್ಟರ್ ನಿಂದ ಬಾಯಿ ಮುಚ್ಚಿಸಿ ಶಬ್ದ ಮಾಡಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಆರು ಜನ ಆರೋಪಿಗಳು 62 ವರ್ಷದ ವೃದ್ದನ ಮೇಲೆ ಹಲ್ಲೆ ನಡೆಸಿ, ಬಳಿಕ ಅವರ ಮನೆಯಲ್ಲಿದ್ದ ಗಡಪಾರಿಯಿಂದ ಬೀರುವಿಗೆ ಹೊಡೆದು ಅದರಲ್ಲಿದ್ದ 1.40 ಲಕ್ಷ ರೂ.ನಗದು ಹಾಗೂ ಲಕ್ಷಾಂತರ ಬೆಲೆಯ ಚಿನ್ನಾಭರಣ ದೋಚಿದ್ದರು. ಬೀರು ಹೊಡೆದ ಶಬ್ಧ ಅರಿತು ಪಕ್ಕದ ಮನೆಯಲ್ಲೇ ವಾಸವಾಗಿದ್ದ ಸಂಬಂಧಿಕರು ಮನೆ ಬಳಿ ದೌಡಾಯಿಸುತ್ತಿದ್ದಂತೆ ಖದೀಮರು ಎಚ್ಚೆತ್ತುಕೊಂಡು ಬ್ಯಾಗಿನಲ್ಲಿ ಕದ್ದಿದ್ದ ಹಣ ಹಾಗೂ ಚಿನ್ನಾಭರಣವನ್ನು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು.