ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಪಾಪಿ ಪುತ್ರನೋರ್ವ ಜನ್ಮ ನೀಡಿದ ತಾಯಿಯನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ ತಾಲೂಕಿನ ಬುಳ್ಳಾಪುರದಲ್ಲಿ ನಡೆದಿದೆ. ಆರೋಪಿ ದೇವರಾಜ್ (27) ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ್ದಾನೆ.
ವನಜಾಕ್ಷಿ ಬಾಯಿ (45) ಕೊಲೆಯಾದ ಮಹಿಳೆಯಾಗಿದ್ದಾರೆ. ಪ್ರತಿದಿನ ಕುಡಿದು ಬಂದು ತನ್ನ ತಂದೆ ಲೋಕೇಶ್ ನಾಯ್ಕ, ತಾಯಿ ವನಜಾಕ್ಷಿ ಜೊತೆ ಜಗಳವಾಡುತ್ತಿದ್ದನು. ಮಗನ ಕಾಟಕ್ಕೆ ಅಪ್ಪ ಅಮ್ಮಇಬ್ಬರು ಬೇಸತ್ತು ಹೋಗಿದ್ದರು. ಅವನ ಸಹವಾಸವೇ ಬೇಡ ಎಂದುಕೊಂಡಿದ್ದರು. ಆದರೆ ದೇವರಾಜ್ ಮಾತ್ರ ಪ್ರತಿದಿನ ಹೆತ್ತವರನ್ನು ಹಿಂಸಿಸುತ್ತಿದ್ದನು.
ಸೋಮವಾರ ರಾತ್ರಿ ಸಹ ಎಂದಿನಂತೆ ಕುಡಿದು ಬಂದು ತಾಯಿ ವನಜಾಕ್ಷಿ ಬಾಯಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಈ ವೇಳೆ ತನ್ನ ತಾಯಿಯ ಕಪಾಳಕ್ಕೆ ಹೊಡೆದಿದ್ದಾನೆ. ಕಪಾಳಕ್ಕೆ ಹೊಡೆಯುತ್ತಿದ್ದಂತೆ ತಾಯಿ ನೆಲಕ್ಕೆ ಬಿದ್ದಿದ್ದಾಳೆ. ಆದರೂ ಬಿಡದ ಪಾಪಿ ಪುತ್ರ ತಾಯಿಯ ಕುತ್ತಿಗೆಯನ್ನು ಕಾಲಲ್ಲಿ ತುಳಿದಿದ್ದಾನೆ. ಕ್ಷಣಾರ್ಧದಲ್ಲೇ ವನಜಾಕ್ಷಿ ಬಾಯಿ ಮೃತಪಟ್ಟಿದ್ದಾಳೆ.
ಮಗನೇ ವನಜಾಕ್ಷಿ ಬಾಯಿಯನ್ನು ಕೊಲೆ ಮಾಡಿರುವ ಬಗ್ಗೆ ಲೋಕೇಶ್ ನಾಯ್ಕ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ದೇವರಾಜ್‍ನನ್ನು ವಶಕ್ಕೆ ಪಡೆದಿದ್ದಾರೆ.