ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿದೆ.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 92 ರನ್ನಿಗೆ ಆಲೌಟ್ ಆಗಿದೆ. ಸವಾಲು ಬೆನ್ನಟ್ಟಿದ ಕೆಕೆಆರ್ ತಂಡ ಕೇವಲ 10 ಓವರ್’ಗಳಲ್ಲಿ ಗುರಿ ಮುಟ್ಟಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್ ಸಿ ಬಿ, ಕೆಕೆಆರ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿದ ಆರ್‌ಸಿಬಿ 19 ಓವರ್‌ಗಳಲ್ಲೇ 92 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದು ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿಯಿಂದ ದಾಖಲಾದ ಆರನೇ ಅತಿ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ ಕೆಕೆಆರ್ ವಿರುದ್ಧವೇ 2017ರಲ್ಲಿ 49 ಹಾಗೂ 2008ರಲ್ಲಿ 82 ರನ್ನಿಗೆ ಆಲೌಟ್ ಆಗಿತ್ತು.
ಈ ಮೊದಲು ಭಾರತದಲ್ಲಿ ನಡೆದ ಟೂರ್ನಿಯ ಮೊದಲಾರ್ಧದಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬರಲಿಲ್ಲ. ಇದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.
200ನೇ ಪಂದ್ಯ ಆಡುತ್ತಿರುವ ನಾಯಕ ವಿರಾಟ್ ಕೊಹ್ಲಿ (5) ತಮ್ಮ ಪಂದ್ಯವನ್ನು ಸ್ಮರಣೀಯವಾಗಿಸುವಲ್ಲಿ ಯಶಸ್ವಿಯಾಗಲಿಲ್ಲ. ದೇವದತ್ತ ಪಡಿಕ್ಕಲ್ (22), ಗ್ಲೆನ್ ಮ್ಯಾಕ್ಸ್‌ವೆಲ್ (10), ಎಬಿ ಡಿವಿಲಿಯರ್ಸ್ (0) ನಿರಾಸೆ ಮೂಡಿಸಿದರು.
ಕೋಲ್ಕತ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರರಾದ ಗಿಲ್(48) ಮತ್ತು ವೆಂಕಟೇಶ್ ಐಯರ್(41*) ರನ್ ಮಾಡುವ ಮೂಲಕ ಕೇವಲ 10 ಓವರ್’ಗಳಲ್ಲಿ ತಂಡವು ಗುರಿ ಮುಟ್ಟಲು ಸಾದ್ಯವಾಯಿತು.
ವರುಣ್ ಚಕ್ರವರ್ತಿ 13 ರನ್ ನೀಡಿ 3 ವಿಕೆಟ್ ಪಡೆದರೆ, ಆಂಸ್ರೆ ರಸೆಲ್ 9 ರನ್ ನೀಡಿ 3 ವಿಕೆಟ್ ಪಡೆದರು. ಲಾಕಿ ಫರ್ಗುಸನ್ 24 ರನ್ ನೀಡಿ 2 ವಿಕೆಟ್ ಪಡೆದರು, ಕನ್ನಡಿಗ ಪ್ರಸಿದ್ಧ ಕೃಷ್ಣ 24 ರನ್ ನೀಡಿ 1 ವಿಕೆಟ್ ಪಡೆದರು.