ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್’ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಮುಲ್ಕಿಯ ಕ್ಷೀರಸಾಗರದ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.
ಪಂಜ ನಿವಾಸಿ ರಘುನಾಥ್ ಪೂಜಾರಿ (40) ಮೃತಪಟ್ಟ ಯುವಕ. ಗಾಯಾಳುಗಳನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ಹಿಮಕರ ಮತ್ತು ಕಾರ್ತಿಕ್ (ಕೇಶವ ಪಂಜ) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಹುಂಡೈ ಕಾರಿನಲ್ಲಿ (KA 21 P0610) ಹೋಗುತ್ತಿದ್ದಾಗ ಏಕಾಏಕಿ ಬಂದ ಬೈಕನ್ನು ತಪ್ಪಿಸಲು ಯತ್ನಿಸಿದಾಗ ಈ ದುರ್ಘಟನೆ ನಡೆದಿದೆ. ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಇನ್ನೊಂದು ರಸ್ತೆಯತ್ತ ನುಗ್ಗಿ ಪಲ್ಟಿಯಾಗಿ ಬಿದ್ದಿದೆ.
ಸಂಜೆ 4.30 ರ ಸುಮಾರಿಗೆ ಘಟನೆ ನಡೆದಿದ್ದು, ಘಟನೆಯಲ್ಲಿ ಮುಂಭಾಗದ ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಘುನಾಥ ಪೂಜಾರಿ (40) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಇನ್ಸ್ಪೆಕ್ಟರ್ ಶರೀಫ್, ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತದ ವಾಹನವನ್ನು ತೆರವುಗೊಳಿಸಿದ್ದಾರೆ.