ಬೆಂಗಳೂರು: ಸ್ವಿಗ್ಗಿ ಫುಡ್ ಡೆಲಿವರಿ ಮತ್ತು ಕೊರಿಯರ್ ಮೂಲಕ ಉನ್ನತ ಮಟ್ಟದ ಗಾಂಜಾವನ್ನು ಮನೆ ಬಾಗಿಲಿಗೆ ಪೂರೈಸುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸೇರಿ ಏಳು ಮಂದಿಯನ್ನು ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಹಿಂಬಾಲಿಸಿ ಮಾದಕ ವಸ್ತು ನಿಯಂತ್ರಣ ಘಟಕ (ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಕಿಂಗ್ಪಿನ್ ಸೇರಿ ಆರು ಮಂದಿ ಮತ್ತು ಹೈದರಾಬಾದ್ನ ಒಬ್ಬ ಪೂರೈಕೆದಾರ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ 140 ಕೆ.ಜಿ. ಉನ್ನತ ಮಟ್ಟದ ಗಾಂಜಾ, 5.20 ಲಕ್ಷ ರೂ. ಮೌಲ್ಯದ ಪಾಕೆಟ್ ಮೆಟಿರಿಯಲ್, ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್ಸಿಬಿ ತಿಳಿಸಿದೆ.
ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಬೆಂಗಳೂರಿನ ಎನ್ಸಿಬಿ ವಲಯ ನಿರ್ದೇಶಕ ಅಮಿತ್ ಗುವಾಹಟೆ ನೇತೃತ್ವದ ಅಧಿಕಾರಿಗಳ ತಂಡ, ಸೆ.30ರಂದು ಬೆಂಗಳೂರಿನಲ್ಲಿ ಕೊರಿಯರ್ ಮೂಲಕ ಬಂದ ಸುಮಾರು ಎಂಟು ಬಾಕ್ಸ್ಗಳನ್ನು ಮಾರುತಿ ಕಾರಿಗೆ ನೇರವಾಗಿ ತುಂಬಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿ 137 ಕೆ.ಜಿ. ಗಾಂಜಾ ವಶಕ್ಕೆ ಪಡೆದು ಪ್ರಕರಣ ಕಿಂಗ್ಪಿನ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಬಳಿಕ ಅವರ ಮನೆಗಳ ಮೇಲೆ ದಾಳಿ ನಡೆಸಿ 4.81 ಲಕ್ಷ ರೂ. ನಗದು ಮತ್ತು ಡ್ರಗ್ಸ್ ಪ್ಯಾಕ್ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರ ಮಾಹಿತಿ ಮೇರೆಗೆ ಸ್ವಿಗ್ಗಿ ಡೆಲಿವರಿ ಬಾಯ್ ವೊಬ್ಬನ ಬಂಧಿಸಲು ಹೋದಾಗ ಆತ ಸ್ವಿಗಿ ಬ್ಯಾಗ್ನಲ್ಲಿ ಡ್ರಗ್ಸ್ ತುಂಬಿಕೊಂಡು ಮಾರಾಟಕ್ಕೆ ಹೊರಟ್ಟಿದ್ದು ಆತನನ್ನು ಬಂಧಿಸಲಾಗಿದೆ. ಆತನ ಮನೆಯಲ್ಲಿ ಮೂರು ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಎನ್ಸಿಬಿ ತಿಳಿಸಿದೆ.