ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿಯೊಬ್ಬಳಿಗೆ ಗೆಳೆಯನ ಮೂಲಕ ಬೆದರಿಕೆ ಕರೆ ಮಾಡಿಸಿದ ಪರಿಣಾಮ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ದೊಡ್ಡಬಿದರಕಲ್ಲು ಬಳಿ ನಡೆದಿದೆ.
ಸಾಕ್ಷಿ (24) ಆತ್ಮಹತ್ಯೆಗೆ ಶರಣಾದ ಯುವತಿ. ಅರುಣ್ ಎಂಬಾತ ಸಾಕ್ಷಿಯನ್ನು ಪ್ರೀತಿಸು, ಮದುವೆಯಾಗು ಎಂದು ಪೀಡಿಸುತ್ತಿದ್ದ. ಆಕೆ ಅದಕ್ಕೆ ಒಪ್ಪದ ಕಾರಣ ಅತನ ಗೆಳೆಯ ಗೋಪಾಲ್ ಬಳಿ ಬೆದರಿಕೆ ಕರೆ ಮಾಡಿಸಿದ್ದಾನೆ. ಇದರಿಂದ ಹೆದರಿದ ಯುವತಿ ದೊಡ್ಡಬಿದರಕಲ್ಲು ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅರುಣ್ ಎನ್ನುವ ಯುವಕ ಗೋಪಾಲ್ ಎನ್ನುವ ಗೆಳೆಯನ ಬಳಿ ಪೊಲೀಸ್ರಂತೆ ನಟಿಸಿ ಫೋನ್ ಮಾಡಿಸಿದ್ದಾನೆ. ಸಾಕ್ಷಿಯ ಮಾವ ಪ್ರಜ್ವಲ್ ಎನ್ನುವವರಿಗೆ ಫೋನ್ ಮಾಡಿ ಸಾಕ್ಷಿಯ ಬಳಿ ಮಾತನಾಡಿದ್ದಾನೆ. ನಕಲಿ ಪೊಲೀಸ್ ಗೋಪಾಲ್ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ಫೋನ್ ಮಾಡುತ್ತಿರುವುದಾಗಿ ಹೇಳಿದ್ದಾನೆ. ಬಳಿಕ ಮುಂದುವರೆದು ನಾನು ಬಸವೇಶ್ವರ್ ನಗರ ಪೊಲೀಸ್ ಠಾಣೆಯಿಂದ ಕರೆ ಮಾಡ್ತಾ ಇದ್ದೇನೆ. ಅರುಣ್ ಎಂಬ ಯುವಕ ನಿಮ್ಮ ಹೆಸರು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅವನನ್ನು ಮದುವೆ ಮಾಡಿಕೊಳ್ಳಿ ಇಲ್ಲವಾದರೆ ಎಫ್ಐಆರ್ ದಾಖಲಿಸುತ್ತೇವೆ ಎಂದು ಬೆದರಿಸಿದ್ದಾನೆ.
ಇದರಿಂದ ಭಯಗೊಂಡ ಯುವತಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಸಾಕ್ಷಿ ಪೋಷಕರು ದೂರು ನೀಡಿದ್ದು, ಪೀಣ್ಯ ಪೊಲೀಸರು ಆರೋಪಿಗಳಾದ ಪ್ರೇಮಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್ನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಸಾಕ್ಷಿ ಬೆಂಗಳೂರಿನ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯಲ್ಲಿ ಕೆಲಸ ಮಾಡುತ್ತಿದ್ದು, ಯುವಕನ ಪ್ರೀತಿಯ ಹುಚ್ಚಾಟಕ್ಕೆ ಯುವತಿ ಬಲಿಯಾಗಿದ್ದಾಳೆ.