ಮಂಗಳೂರು: ಮೂಕ ಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ರೈಲಿನಡಿ ಸಿಲುಕಿ ತನ್ನೆರಡು ಕಾಲುಗಳನ್ನ ಕಳೆದುಕೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಜೋಕಟ್ಟೆಯಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಚೇತನ್(21) ಎಂದು ತಿಳಿದು ಬಂದಿದೆ.
ಕಳೆದ ಆ.28ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದ ಚೇತನ್ ಆಡಿನ ಮರಿಯೊಂದು ರೈಲು ಹಳಿಯುದ್ದಕ್ಕೂ ಓಡಾಡಿಕೊಂಡಿದ್ದನ್ನು ಕಂಡು, ಆಡು ಮರಿಯ ರಕ್ಷಣೆಗೆ ಮುಂದಾಗಿದ್ದಾನೆ. ಆಡು ಮರಿಯನ್ನು ಹಳಿಯಿಂದ ಮೇಲೆತ್ತಿ ರಕ್ಷಿಸುವ ವೇಳೆ ರೈಲು ಬಂದು ಅಪ್ಪಳಿಸಿದ್ದು, ಚೇತನ್ ಕಾಲಿನ ಮೇಲೆಯೇ ರೈಲು ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಅವರನ್ನು ಮಂಗಳೂರಿನ ಎಜೆ ಆಸ್ವತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅವರನ್ನು ಉಳಿಸುವುದಕ್ಕಾಗಿ ಗೆಳೆಯರು ಬೀದಿ ಬೀದಿಯಲ್ಲಿ ಹಣ ಸಂಗ್ರಹಿಸಿದಲ್ಲದೆ, ಸಮಾಜದ ಮಾನವೀಯತೆ ಉಳ್ಳವರು ತಮ್ಮಿಂದಾದಷ್ಟು ಹಣವನ್ನು ನೀಡಿ ಸಹಕರಿಸಿದ್ದರು. ಸ್ವಲ್ಪ ಚೇತರಿಸಿಕೊಂಡ ಚೇತನ್ ರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತಂದಿದ್ದರು. ಮಾನಸಿಕವಾಗಿ ಕುಗ್ಗಿದ ಚೇತನ್ ಊಟ ಸರಿ ಮಾಡದೆ ಪುನಃ ಆಸ್ವತ್ರೆಗೆ ದಾಖಲಾಗಿದ್ದು, ಇಂದು ತನ್ನ ಮನೆಯವರನ್ನು, ಗೆಳೆಯರನ್ನು ಹಾಗೂ ಬಂಧುಮಿತ್ರರನ್ನು ಬಿಟ್ಟು ಇಹ ಲೋಹ ತ್ಯಜಿಸಿದ್ದಾರೆ.
ಸರಳ ಸಜ್ಜನ ವ್ಯಕ್ತಿಯಾದ ಚೇತನ್ ಯಾರ ಮನಸ್ಸಿಗೂ ನೋವು ಕೊಡದೆ ತಾನು ಕಷ್ಟಪಟ್ಟು ದುಡಿದು ಇನ್ನೊಬ್ಬರ ಕಷ್ಟಗಳಿಗೂ ಸ್ವಂಧಿಸುವ ವ್ಯಕ್ತಿತ್ವವಾಗಿದ್ದು, ದೇವರು ಈ ಎಳೆಯ ವಯಸ್ಸಿನಲ್ಲಿ ಅವನನ್ನು ಕರೆದುಕೊಂಡು ಹೋಗಬಾರದಿತ್ತು ಎಂದು ಗೆಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಬಡ ಕುಟುಂಬದ ಹಿನ್ನೆಲೆ ಹೊಂದಿದ್ದ ಚೇತನ್ ಖಾಸಗಿ ಬಸ್ನಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದನು.
ಕಳೆದ ಕೆಲವು ದಿನಗಳ ಹಿಂದೆ ಸ್ವಲ್ಪ ಚೇತರಿಸಿಕೊಂಡ ಚೇತನ್ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತಂದಿದ್ದರು.
ಆದರೆ ಮಾನಸಿಕವಾಗಿ ಕುಗ್ಗಿದ ಚೇತನ್ ಊಟ ಸರಿ ಮಾಡದೆ ಇದೀಗ ಇಹಲೋಹ ತ್ಯಜಿಸಿದ್ದಾರೆ.