ಮಂಗಳೂರು: ಮಂಗಳೂರಿನ ಆರೋಗ್ಯ ಇಲಾಖೆಯ ಸರ್ಕಾರಿ ಅಧಿಕಾರಿಗೆ ಕಳೆದ 6 ತಿಂಗಳಿಂದ ವೇತನ ನೀಡದೇ ಸತಾಯಿಸುತ್ತಿದ್ದುದನ್ನು ಖಂಡಿಸಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪ್ರತಿಭಟನೆ ನಡೆಸಿದ ವ್ಯಕ್ತಿ ಜಲೀಲ್ ಇಬ್ರಾಹಿಂ ಎಂಬುವವರು ಮಂಗಳೂರು ನಗರ ಹೊರವಲಯದ ನಾಟೆಕಲ್ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 22 ವರ್ಷಗಳಿಂದ ಕಿರಿಯ ಪ್ರಯೋಗಾಲಯದ ತಾಂತ್ರಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಲೀಲ್ ಇಬ್ರಾಹಿಂ ಬಗ್ಗೆ ಈ ಹಿಂದೆ ಯಾವುದೇ ಇಲಾಖಾ ವಿಚಾರಣೆಯಾಗಲೀ, ಗೈರುಹಾಜರಾಗಲೀ ಇರುವುದಿಲ್ಲವೆಂದು ತಿಳಿಸಿದ್ದಾರೆ.

ಆದರೆ ಕಳೆದ 6 ತಿಂಗಳ ಹಿಂದೆ ಹೊಸದಾಗಿ ನೇಮಕಗೊಂಡ ವೈದ್ಯಾಧಿಕಾರಿಯೊಬ್ಬರು ಚಿಕ್ಕಪುಟ್ಟ ಕಾರಣಗಳನ್ನು ತಿಳಿಸಿ ಅದನ್ನು ನೆಪವಾಗಿಟ್ಟು ವೇತನ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಡಿಸಿ ಸೇರಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆಂದು ಪತ್ರಿಕೆಗೆ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ಜಲೀಲ್ ಇಬ್ರಾಹಿಂಗೆ ವೇತನ ಮಾಡಲು ಆದೇಶ ನೀಡಿದರೂ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
