ಮಂಗಳೂರು: ಮಂಗಳೂರಿನ ಕಾಂಗ್ರೆಸ್ ಕಛೇರಿಗೆ ಬಿಜೆಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ.
ಪಂಜಾಬ್ ನಲ್ಲಿ ಪ್ರಧಾನಿ ಮೋದಿಗೆ ಭದ್ರತೆ ಒದಗಿಸದ ಅಲ್ಲಿನ ಕಾಂಗ್ರೆಸ್ ಸರಕಾರದ ವಿರುದ್ಧ ಮಂಗಳೂರಿನ ಕಾಂಗ್ರೆಸ್ ಕಛೇರಿಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಯುವಮೋರ್ಚ ನಗರ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಸುಮಾರು 50 ಮಂದಿಯಷ್ಟು ಜನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಛೇರಿಯ ಮುಂಭಾಗ ಜಮಾಯಿಸಿ ಕಾಂಗ್ರೆಸ್ ಗೆ ಧಿಕ್ಕಾರ ಕೂಗಿದ್ದಾರೆ.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಕದ್ರಿ ಪೊಲೀಸರು ಬಿಜೆಪಿ ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿದರು. ಪೊಲೀಸರ ಮನವೊಲಿಕೆಗೆ ಬಗ್ಗದ ಬಿಜೆಪಿ ಕಾರ್ಯಕರ್ತರು ಮೋದಿ ಪರ ಜೈಕಾರ ಕೂಗುತ್ತಾ ನುಗ್ಗುತ್ತಾ ಬಂದಿದ್ದಾರೆ. ಅಷ್ಟರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಮೋದಿ ವಿರುದ್ದ ಧಿಕ್ಕಾರ ಕೂಗಿದ್ದಾರೆ.

ಎರಡೂ ಪಕ್ಷದ ಕಾರ್ಯಕರ್ತರು ಜಮಾಯಿಸಿದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರ ಮಧ್ಯೆಯೇ ತಳ್ಳಾಟ, ನೂಕಾಟ ನಡೆದಿದೆ.
ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾಲೋಪ ಖಂಡಿಸಿ ಬಿಜೆಪಿ ಯುವಮೋರ್ಚಾದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ ಎಂದು ವರದಿಯಾಗಿದೆ.