ಮುಡಿಪು: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ ಪೊಲೀಸರು ಒಂದೇ ತಿಂಗಳಲ್ಲಿ ಒಂಭತ್ತು ಸಾವಿರ ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ ನಡೆದಿದೆ.
ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್ ಎದುರುಗಡೆ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ರೂ. 9,000 ದಷ್ಟು ದಂಡ ವಿಧಿಸಲಾಗಿದೆ. ಯಾವ ಕಡೆಯೂ ಇಲ್ಲದ ಕಾನೂನನ್ನು ಮುಡಿಪು ಜಂಕ್ಷನ್ನಿನಲ್ಲಿ ನಾಗುರಿ ಸಂಚಾರಿ ಠಾಣಾ ಪೊಲೀಸರು ಹೇರಿದ್ದಾರೆ ಅನ್ನುವ ಆರೋಪ ವ್ಯಕ್ತವಾಗಿದೆ.
ಮೆಡಿಕಲ್ ಸ್ಟೋರ್ ಮಾಲಕಿ ಶ್ರೀಮತಿ ಅವರನ್ನು ಮುಡಿಪುವಿನಲ್ಲಿ ಕಳೆದ ವರ್ಷದ ಆರಂಭದಲ್ಲಿ ತಡೆದ ಟ್ರಾಫಿಕ್ ಪೊಲೀಸರು ನಿಮ್ಮ ಸ್ಕೂಟರ್ ವಿರುದ್ಧ 5,000 ರೂಪಾಯಿ ದಂಡ ಹಾಕಿದ್ದಾರೆ. ದಂಡ ಪ್ರಯೋಗದ ಮಾಹಿತಿಯೇ ಇಲ್ಲದ ಮಹಿಳೆ ಅವರು ತನಗೇಕೆ ದಂಡ ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರವನ್ನು ಟ್ರಾಫಿಕ್ ಪೊಲೀಸರು ಪ್ರಸ್ತಾಪಿಸಿದ್ದಾರೆ.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿರುವ ಕಾರಣಕ್ಕೆ ಸಂಚಾರಿ ಪೊಲೀಸರು ಛಾಯಾಚಿತ್ರ ತೆಗೆದು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕಳಿಸುತ್ತಾರೆ. ಅಲ್ಲಿ ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ನೋಟೀಸನ್ನು ವಾಹನದ ನೋಂದಣಿದಾರರಿಗೆ ಕಳುಹಿಸಲಾಗುವುದು.
ಇದೀಗ ನಿಯಮ ಉಲ್ಲಂಘಿಸಿರುವ ದಂಡವನ್ನು ವಾಹನದ ಮಾಲೀಕರು ಮರುಪಾವತಿಸಲೇಬೇಕಾಗಿದೆ. ದಂಡದಲ್ಲಿ ವಿನಾಯಿತಿ ಪಡೆಯಬಹುದು ಹೊರತು ಪ್ರಕರಣ ಹಿಂಪಡೆಯಲಾಗುವುದಿಲ್ಲ. ದಿನದಲ್ಲಿ ಸಂಚಾರಿ ಠಾಣಾ ಪಿ.ಸಿ.ಆರ್, ಹೊಯ್ಸಳ, ಗಸ್ತು ನಿರತ ಸಂಚಾರಿ ಪೊಲೀಸರು ತಿರುಗುವ ಸಂದರ್ಭ ನಿಯಮ ಉಲ್ಲಂಘನೆ ಆದಾಗ ಫೋಟೋ ಕ್ಲಿಕ್ಕಿಸುತ್ತಾರೆ.
ದಿನದಲ್ಲಿ ಬೇರೆ ಬೇರೆ ಸಿಬ್ಬಂದಿ ಫೋಟೋ ತೆಗೆದು ಕಳುಹಿಸುತ್ತಾರೆ. ಆದರೆ ಒಂದು ದಿನದ ಒಂದು ಪ್ರಕರಣದ ದಂಡ ಮಾತ್ರ ಪಡೆಯುತ್ತೇವೆ. ನೋ ಪಾರ್ಕಿಂಗ್ ಸಂಬಂಧ ರೂ.500 ಮತ್ತು ಸಂಚಾರಕ್ಕೆ ಅಡ್ಡಿ ಸಂಬಂಧ ರೂ. 1000 ದಂಡ ವಿಧಿಸಲಾಗಿದೆ ಎಂದು ನಾಗುರಿ ಸಂಚಾರಿ ಠಾಣೆ ನಿರೀಕ್ಷಕ ಗುರು ಕಾಮತ್ ತಿಳಿಸಿದ್ದಾರೆ.
ತನಗೆ ಅದರ ಬಗ್ಗೆ ಗೊತ್ತಿಲ್ಲ. ಕೇಸ್ ಬಗ್ಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಶ್ರೀಮತಿ ಅವರು ಪೊಲೀಸರಲ್ಲಿ ಹೇಳಿದ್ದಾರೆ. ತಿಂಗಳಿಗೆ 500 ರೂ. ಮತ್ತು 1,000 ರೂಪಾಯಿ ದಂಡ ಪ್ರಯೋಗದ ಎರಡು ನೋಟೀಸುಗಳು ಬರಲಾರಂಭಿಸಿದ್ದು ಈವರೆಗೆ 16 ನೋಟೀಸುಗಳು ಬಂದಿದೆ.
ಅವೆಲ್ಲವನ್ನು ಶ್ರೀಮತಿ ಅವರು ತನ್ನ ಮೆಡಿಕಲ್ ಶಾಪ್ ಎದುರುಗಡೆ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ.