ಉಡುಪಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ದಕ್ಷಿನ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಎಂದಿನಂತೆ ಇಂದು ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬಂದಿದ್ದು, ಪ್ರಾಂಶುಪಾಲರು ಹಿಜಾಬ್ ತೆಗೆದು ಬನ್ನಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು, ಕಾಲೇಜ್ ಆವರಣದಲ್ಲೇ ಪ್ರತಿಭಟನೆ ಮಾಡಿದ್ದಾರೆ.
ಕೋರ್ಟ್ ಆದೇಶ ಬರುವವರೆಗೆ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಇಷ್ಟು ದಿನ ಹಿಜಾಬ್ ಧರಿಸಿ ಬಂದಿದ್ದೇವೆ, ಇನ್ನು ಮುಂದೆಯೂ ಧರಿಸಿಯೇ ಬರುತ್ತೇವೆ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಎರಡು ದಿನ ಕಾಲೇಜಿಗೆ ರಜೆ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಗುಂಪು ಸೇರಿದ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಕಾಲೇಜಿಗೆ ಎರಡು ದಿನಗಳ ರಜೆಯನ್ನು ಘೋಷಿಸಿದ್ದಾರೆ.
ತಮಗೆ ತರಗತಿ ನಡೆಸುವಂತೆ ಒಂದು ಗುಂಪಿನ ವಿದ್ಯಾರ್ಥಿಗಳು ಮತ್ತೆ ಪ್ರಾಂಶುಪಾಲರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಇನ್ನೊಂದು ಗುಂಪು ಹಿಜಾಬ್ ಧರಿಸಿಯೇ ತಮಗೆ ತರಗತಿಯಲ್ಲಿ ಕೂರಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಎರಡೂ ಗುಂಪುಗಳನ್ನು ಲಾಠಿ ಬೀಸಿ ಚದುರಿಸಿದ್ದಾರೆ.
ಹಿಜಾಬ್ ವಿಚಾರದಲ್ಲಿ ಕಾಲೇಜಿಗೆ ರಜೆ ನೀಡಿದ ಪ್ರಾಂಶುಪಾಲರ ಕ್ರಮಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವೇ ವಿದ್ಯಾರ್ಥಿಗಳ ಹಠದಿಂದಾಗಿ ತಮ್ಮ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.