ಮಂಗಳೂರು: ತನ್ನ ಆಶ್ರಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಸೇರಿ ಮೂವರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳು ಮೂಲ್ಕಿಯ ಕಾರ್ನಾಡು ನಿವಾಸಿ ಮೊಹಮ್ಮದ್ ಆಸಿಫ್ (39 ವ), ಮಂಗಳೂರು ಪಂಪ್ ವೆಲ್ ನಿವಾಸಿ ಶಿವಂ ಯಾನೆ ಶಿವಲಿಂಗ (40 ವ), ಮತ್ತು ಮೊಹಮ್ಮದ್ ಅಫ್ತಾಬ್ (32 ವ) ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಕೋವಿಡ್-19 ಸಮಯದಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಕೆಲಸ ಕಳೆದುಕೊಂಡು, ಮನೆಬಾಡಿಗೆ ಕಟ್ಟಲು ತೊಂದರೆಯಾದ ಸಮಯದಲ್ಲಿ ಪಂಪ್‍ವೆಲ್‍ನಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಂ ಯಾನೆ ಶಿವಲಿಂಗ ಎಂಬವರ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಶಿವಲಿಂಗನು ಮಹಿಳೆಯನ್ನು ಮೂಲ್ಕಿಯ ಕಾರ್ನಾಡ್‍ನಲ್ಲಿರುವ ಮೈಮುನಾ ಫೌಂಡೇಷನ್ ನ ಆಶ್ರಮಕ್ಕೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು.
ಮಹಿಳೆ ಒಂದು ವರ್ಷದಿಂದ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಂಸ್ಥೆಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ ಶಶಿಧರ್ ಎಂಬಾತ ಗೋಲ್ ಮಾಲ್ ನಡೆಸಿ ಪರಾರಿಯಾಗಿದ್ದ. ಈ ವಂಚನೆಯಲ್ಲಿ ಮಹಿಳೆಯೂ ಪಾಲುದಾರರಾಗಿದ್ದಾರೆಂದು ಆರೋಪಿಸಿ ಆಸಿಫ್ ದೈಹಿಕ ಹಿಂಸೆ ನೀಡುತ್ತಿದ್ದ. ಮಹಿಳೆಯ ಬಳಿಯಿದ್ದ ಮೊಬೈಲ್, ಮೈಕ್ರೋಮ್ಯಾಕ್ಸ್ ಟ್ಯಾಬ್, ಇನ್ನೊಂದು ಸಣ್ಣ ಪೋನ್, ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಕಸಿದುಕೊಂಡಿದ್ದಾರೆ.
ಮಾ.30 ರಂದು ಮಹಿಳೆಯಿದ್ದ ಕೋಣೆಗೆ ಬಂದ ಆಸಿಫ್ ಜಗಳವಾಡಿ, ನಂತರ ಶಿವಂನನ್ನು ಕರೆಯಿಸಿ, ಮಹಿಳೆಗೆ ಹೊಡೆಯುವಂತೆ ಹೇಳಿದ್ದಾರೆ. ಶಿವಂ ಮಹಿಳೆ ಮುಖಕ್ಕೆ ಕೈಯಿಂದ, ಪ್ಲಾಸ್ಟಿಕ್ ಕುರ್ಚಿಯಿಂದ ಎಡ ಕೈಗೆ ಹೊಡೆದಿದ್ದಾರೆ. ಶಿವಂ ಹೋದ ಬಳಿಕ ಆಸಿಫ್, ಮಹಿಳೆ ಬಳಿ ಶಶಿಧರ್ ಮಾಡಿ ತಪ್ಪನ್ನು ತಾನು ಒಪ್ಪಿ ಬರೆದುಕೊಡುವಂತೆ ಒತ್ತಾಯ ಮಾಡಿ, ಬೆಲ್ಟ್ ನಿಂದ ದೇಹದ ವಿವಿಧ ಭಾಗಕ್ಕೆ ಹೊಡೆದಿದ್ದಾರೆ. ಬಳಿಕ ವಿಕೆಟ್‍ನಿಂದ ಮಹಿಳೆ ತಲೆಗೆ ಹೊಡೆದಿದ್ದಾರೆ. ನಂತರ ಆಸಿಫ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಅಲ್ಲಿ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿರುವುದಾಗಿ ಡಾಕ್ಟರ್ ಗೆ ಸುಳ್ಳು ಹೇಳಬೇಕು ಎಂದು ಒತ್ತಾಯಿಸಿದ್ದಲ್ಲದೇ, ಜೀವ ಬೆದರಿಕೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಂತರ ಆಶ್ರಮಕ್ಕೆ ಕರೆದುಕೊಂಡು ಬಂದು, ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.