ಮುಂಬೈ: ಆರಂಭಿಕ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅವರ ಭರ್ಜರಿ ಆಟ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 23 ರನ್ ಅಂತರದ ಗೆಲುವು ಸಾಧಿಸಿದೆ.
ಐಪಿಎಲ್ನ 22ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ದ ಗೆಲ್ಲುವ ಮೂಲಕ ಸಿಎಸ್ಕೆ ತಂಡ ಮೊದಲ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಶಿವಂ ದುಬೆ (95) ಹಾಗೂ ರಾಬಿನ್ ಉತ್ತಪ್ಪ (88) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ 4 ವಿಕೆಟ್ ನಷ್ಟಕ್ಕೆ 216 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 217 ರನ್ಗಳ ಟಾರ್ಗೆಟ್ ಪಡೆದ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅದರಂತೆ ಸಿಎಸ್ಕೆ ತಂಡವು 23 ರನ್ಗಳ ಭರ್ಜರಿ ಜಯ ಸಾಧಿಸಿತು.
ಆರ್ಸಿಬಿ ಪರ ಶಹಬಾಝ್ ಅಹ್ಮದ್ (41 ರನ್, 27 ಎಸೆತ), ಸುಯಶ್ ಪ್ರಭುದೇಸಾಯಿ (34 ರನ್, 18 ಎಸೆತ), ದಿನೇಶ್ ಕಾರ್ತಿಕ್ (34 ರನ್, 14 ಎಸೆತ) ಉತ್ತಮ ಬ್ಯಾಟಿಂಗ್ ನಡೆಸಿದರು. ಚೆನ್ನೈ ಪರ ಮಹೀಶ್ ತೀಕ್ಷಣ 33 ರನ್ ನೀಡಿ 4, ಜಡೇಜ 39 ರನ್ ನೀಡಿ 3 ವಿಕೆಟ್ ಪಡೆದು ಬೆಂಗಳೂರನ್ನು ಸಂಪೂರ್ಣವಾಗಿ ನಿಯಂತ್ರಿಸಿದರು.
ಈ ಮೊದಲು ಬ್ಯಾಟಿಂಗ್ ಮಾಡಿದ ಟೂರ್ನಿಯಲ್ಲಿ ಸತತ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ ಓವರ್ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 193 ರನ್ ಮಾಡಿ ಸೋಲೊಪ್ಪಿಕೊಂಡಿತು.
ಮಂಗಳವಾರ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್ಸಿಬಿಯ ಫಫ್ ಡು ಪ್ಲೆಸಿ ಬೌಲಿಂಗ್ ಆಯ್ಕೆ ಮಾಡಿಕೊಂಡು, ರವೀಂದ್ರ ಜಡೇಜ ಮುಂದಾಳತ್ವದ ಸಿಎಸ್ಕೆಗೆ ಬ್ಯಾಟಿಂಗ್ ಅವಕಾಶ ನೀಡಿದರು. ಉತ್ತಪ್ಪ ಮತ್ತು ಶಿವಂ ಅಂಗಳದಲ್ಲಿ ಸಿಕ್ಸರ್ ಮಳೆಗರೆದರು. ಇಬ್ಬರು 165 ರನ್ ದಾಖಲೆಯ ಜೊತೆಯಾಟದ ಮೂಲಕ ತಂಡದ ಸ್ಕೋರ್ 200 ರನ್ ಗಡಿ ದಾಟಿಸಿದರು.
50 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ 9 ಸಿಕ್ಸರ್, 4 ಬೌಂಡರಿ ಸೇರಿ 88 ರನ್ ಸಿಡಿಸಿದರು. ಹಸರಂಗ ಓವರ್ನಲ್ಲಿ ಕ್ಯಾಚ್ ಕೊಟ್ಟು ಆಟ ಮುಗಿಸಿದರು. ಅನಂತರವೂ ಶಿವಂ ದುಬೆ ಸಿಕ್ಸರ್ ಹೊಡೆತಗಳನ್ನು ಮುಂದುವರಿಸಿದರು. 46 ಎಸೆತಗಳಲ್ಲಿ 95 ರನ್ ಬಾರಿಸಿದರು.
ಸಿಎಸ್ಕೆ ಕಲೆಹಾಕಿರುವ 216 ರನ್ಗಳಲ್ಲಿ 12 ಫೋರ್, 17 ಸಿಕ್ಸರ್ಗಳು ಸೇರಿವೆ. ಆರ್ಸಿಬಿಯ ಆಕಾಶ್ ದೀಪ್ ಅತಿ ಹೆಚ್ಚು 58 ರನ್ ಕೊಟ್ಟು, ದುಬಾರಿ ಬೌಲರ್ ಎನಿಸಿದರು. ಹಸರಂಗ ಒಂದೇ ಓವರ್ನಲ್ಲಿ ಎರಡು ವಿಕೆಟ್ ಕಬಳಿಸಿ ಸಿಎಸ್ಕೆಯ ಅಂತಿಮ ಹಂತದ ರನ್ ಓಟಕ್ಕೆ ತಡೆಯಾದರು.
ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕವಾಡ್ ಮತ್ತು ರಾಬಿನ್ ಉತ್ತಪ್ಪ ಉತ್ತಮ ಆರಂಭ ನೀಡುವ ವಿಶ್ವಾಸ ಮೂಡಿಸಿದರು. ಆದರೆ, ತಂಡ 19 ರನ್ ಗಳಿಸುವಷ್ಟರಲ್ಲಿ ಮೂರು ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಗಾಯಕವಾಡ್ (17 ರನ್) ಜೋಶ್ ಹ್ಯಾಜಲ್ವುಡ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಆರನೇ ಓವರ್ನಲ್ಲಿ ಸುಯಶ್ ಪ್ರಭುದೇಸಾಯಿ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಮಿಂಚಿನ ಆಟಕ್ಕೆ ಮೋಯಿನ್ ಅಲಿ ವಿಕೆಟ್ ಕಳೆದುಕೊಂಡರು.
ಉತ್ತಪ್ಪ-ದುಬೆ ಭರ್ಜರಿ ಆಟ: ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅವರು ಆರ್ಸಿಬಿ ದಾಳಿಯನ್ನು ದಂಡಿಸಿದರು. ಆಕಾಶ್ದೀಪ್, ಹಸರಂಗ, ಮ್ಯಾಕ್ಸ್ವೆಲ್ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದು ಪ್ರೇಕ್ಷಕರನ್ನು ರಂಜಿಸಿದರು. ಮೂರನೇ ವಿಕೆಟಿಗೆ 165 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಇವರಿಬ್ಬರು ಚೆನ್ನೈ ಬೃಹತ್ ಮೊತ್ತ ಪೇರಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್:
CSK: 20 ಓವರ್, 216/4
(ಶಿವಂ ದುಬೆ 95, ರಾಬಿನ್ ಉತ್ತಪ್ಪ 88, ವನಿಂದು ಹಸರಂಗ 35ಕ್ಕೆ 2).
ಬೆಂಗಳೂರು: 20 ಓವರ್, 193/9
(ಶಹಬಾಝ್ ಅಹ್ಮದ್ 41, ದಿನೇಶ್ ಕಾರ್ತಿಕ್ 34, ಮಹೀಶ್ ತೀಕ್ಷಣ 33ಕ್ಕೆ 4, ರವೀಂದ್ರ ಜಡೇಜ 39ಕ್ಕೆ 3).