dtvkannada

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ದೆಹಲಿ ಎನ್‍ಸಿಆರ್ ಪ್ರದೇಶದ ಒಂದು ಶಾಲೆಯಲ್ಲಿ 18 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಾಲೆಯನ್ನು ತಕ್ಷಣದಿಂದ ಮುಚ್ಚಲಾಗಿದೆ.

ಸಾಂದರ್ಭಿಕ ಚಿತ್ರ

ಹೊಸ ಪ್ರಬೇಧದ ಸೋಂಕು ಪತ್ತೆಯಾಗುವವರೆಗೆ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ದೆಹಲಿ ಸರ್ಕಾರ ಅಭಯ ನೀಡಿದೆ. ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಪ್ರತಿ ಶತ ಒಂದಕ್ಕಿಂತ ಅಧಿಕವಾಗಿರುವುದನ್ನು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ದೃಢಪಡಿಸಿದ್ದಾರೆ.

ಕಳೆದ ವಾರದವರೆಗೂ ಪಾಸಿಟಿವಿಟಿ ದರ ಶೇಕಡ ಒಂದಕ್ಕಿಂತ ಕಡಿಮೆ ಇದ್ದ ರಾಜಧಾನಿಯಲ್ಲಿ ಸೋಮವಾರ ಪಾಸಿಟಿವಿಟಿ ದರ ಶೇಕಡ 2.7ಕ್ಕೆ ಏರಿದೆ. ಹಬ್ಬದ ಸೀಸನ್‍ನ ವಾರಾಂತ್ಯದಲ್ಲಿ ತಪಾಸಣೆಗಳು ಕಡಿಮೆ ನಡೆದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ 24 ಗಂಟೆಗಳಲ್ಲಿ ಪರೀಕ್ಷೆ ನಡೆಸಿದ 5079 ಮಾದರಿಗಳ ಪೈಕಿ 137 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಇದು ಮತ್ತೊಂದು ಅಲೆಯ ಸ್ಪಷ್ಟ ಸೂಚನೆ ಎಂದು ತಜ್ಞರು ಹೇಳುತ್ತಿದ್ದು ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಾತಾವರಣದಲ್ಲಿ ವೈರಸ್ ಇನ್ನೂ ಇದೆ. ಇದರಿಂದ ಸೋಂಕು ಹರಡುವುದು ಸಹಜ, ಆದರೆ ಆಸ್ಪತ್ರೆಗೆ ದಾಖಲಾಗುವ ದರ ಕಡಿಮೆ ಇರುವ ವರೆಗೂ ಆತಂಕಪಡುವ ಅಗತ್ಯವಿಲ್ಲ ಎಂದು ಎಐಐಎಂಎಸ್‍ನ ಔಷಧ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ.ನೀರಜ್ ನಿಶ್ಚಲ್ ಹೇಳಿದ್ದಾರೆ.

ಕಳೆದ ಒಂದು ವಾರದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಿರುವ 9745 ಬೆಡ್‍ಗಳ ಪೈಕಿ ಕೇವಲ 47 ಮಾತ್ರ ಭರ್ತಿಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ

By dtv

Leave a Reply

Your email address will not be published. Required fields are marked *

error: Content is protected !!