ಉಳ್ಳಾಲ: ಯುವತಿಯ ವಿಚಾರಕ್ಕೆ ಸಂಬಂಧಿಸಿ ಯುವಕನೋರ್ವನಿಗೆ ಗುಂಪಿನಲ್ಲಿ ಬಂದ ಯುವಕರೆಲ್ಲರು ಸೇರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ.
ಕೋಡಿ ನಿವಾಸಿ ಅಲ್ ಸದೀನ್ ( 24) ಕೊಲೆ ಯತ್ನಕ್ಕೆ ಒಳಗಾದವರು. ಇವರು ಮಸೀದಿ ಬಳಿ ನಿಂತಿದ್ದ ವೇಳೆ ಗುಂಪಿನಲ್ಲಿ ಬಂದ ಹುಡುಗರ ತಂಡವೊಂದು ಚೂರಿಯಿಂದ ಬೆನ್ನಿನ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ.
ನಾಲ್ಕು ಮಂದಿಯ ತಂಡ ದಾಳಿ ನಡೆಸಿದೆ. ಮಾಹಿತಿಗಳ ಪ್ರಕಾರ ಎಲ್ಲರೂ ಸ್ನೇಹಿತರಾಗಿದ್ದು, ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭ ಯುವತಿಯ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದು ಚೂರಿಯಿಂದ ಇರಿದಿದ್ದಾರೆ. ದಾಳಿಗೊಳಗಾದವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಕೆಲ ತಿಂಗಳುಗಳ ಹಿಂದೆ ಉಳ್ಳಾಲ ಠಾಣಾ ಪೊಲೀಸ್ ವಾಹನಕ್ಕೆ ಬಾಟಲಿಯಿಂದ ದಾಳಿ ನಡೆಸಿರುವ ಪ್ರಕರಣವೂ ಇರುವುದಾಗಿ ತಿಳಿದುಬಂದಿದೆ.
ದೇರಳಕಟ್ಟೆ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶಶಿಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.