ಸುಳ್ಯ: ಎ.13:- ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಅನಿಯಂತ್ರಿತ ಬೆಲೆಯೇರಿಕೆಯ ವಿರುದ್ಧ ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ, ಬೆಳ್ಳಾರೆ ಕೆಳಗಿನ ಪೇಟೆಯಿಂದ ಬಸ್ಸು ನಿಲ್ದಾಣದ ವರೆಗೆ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಅನಿಯಂತ್ರಿತ ಬೆಲೆ ಏರಿಕೆಯಿಂದ ಸಮಾಜದ ಎಲ್ಲಾ ವರ್ಗದ ಜನರು ಕಂಗೆಟ್ಟಿದ್ದು ಬದುಕು ದುಬಾರಿ ಆಗುತ್ತಿದೆ. ಕೊರೋನಾ ನಂತರ ಆರ್ಥಿಕ ಹೊಡೆತಕ್ಕೆ ಜನಸಾಮಾನ್ಯರು ಬಲಿಯಾಗಿದ್ದು ಇದೀಗ ದಿನನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಸರಕಾರಗಳು ನೈಜ ಘಟನೆಯನ್ನು ಮರೆಮಾಚಿ ಕೋಮುಧ್ರುವೀಕರಣದ ಮೂಲಕ ಜನರನ್ನು ಧರ್ಮ, ಜಾತಿಯ ಹೆಸರಲ್ಲಿ ಪ್ರಚೋದಿಸಿ ಅನಗತ್ಯ ವಿಚಾರಗಳ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಎಸ್ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಉಪಾಧ್ಯಕ್ಷ ಬಾಬು ಸವಣೂರು, ಜೊತೆ ಕಾರ್ಯದರ್ಶಿ ಉವೈಸ್ ಸಂಪಾಜೆ, ಕ್ಷೇತ್ರ ಸಮಿತಿ ಸದಸ್ಯರಾದ ಸಿದ್ದೀಕ್.ಎ, ಅಬ್ದುಲ್ ರಹಿಮಾನ್ ಅಡ್ಕಾರ್, ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಹಮೀದ್ ಮರಕ್ಕಡ, ಕಾರ್ಯದರ್ಶಿ ನೌಫಲ್ ಟಿ.ಎ, ಸವಣೂರು ಬ್ಲಾಕ್ ಕಾರ್ಯದರ್ಶಿ ಶರೀಫ್ ನಿಂತಿಕಲ್ಲು, ಸುಳ್ಯ ನಗರ ಕಾರ್ಯದರ್ಶಿ ಸಾಜಿದ್ ಸುಳ್ಯ, ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ರಝಾಕ್ ಕೆನರಾ, ಇರ್ಷಾದ್ ಸರ್ವೆ, ಫೈಝಲ್ ಬೆಳ್ಳಾರೆ, ಶಫೀಕ್ ಬೆಳ್ಳಾರೆ, ಜಾಬಿರ್ ಸಿ.ಎಂ ಮೊದಲಾದವರು ಉಪಸ್ಥಿತರಿದ್ದರು.
ಸವಣೂರು ಬ್ಲಾಕ್ ಅಧ್ಯಕ್ಷ ರಫೀಕ್ ಎಂ.ಎ ಸ್ವಾಗತಿಸಿ, ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.